ಇದು ಕೇವಲ ಟ್ರೈಲರ್‌ ಅಷ್ಟೆ, ಪಿಕ್ಚರ್‌ ಇನ್ನು ಬಾಕಿ ಇದೆ ಎಂದು ಸರ್ಕಾರದ ಸಾಧನೆ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸರ್ಕಾರದ ಸಾಧನೆಯನ್ನು ಬಣ್ಣಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಲಿವುಡ್​ ನಟ ಶಾರುಖ್​ ಖಾನ್​ ಅವರ ಸಿನಿಮಾದ ಸಂಭಾಷಣೆಯನ್ನು ಬಳಸಿದ್ದು, ಕೇಂದ್ರ ಸರ್ಕಾರದ ಮೊದಲ 100 ದಿನದ ಆಡಳಿತ ಕೇವಲ ಟ್ರೈಲರ್ ಅಷ್ಟೇ, ಮುಂಬರುವ ವರ್ಷಗಳಲ್ಲಿ ಪೂರ್ಣ ಸಿನಿಮಾ ಬರಲಿದೆ ಎಂದು ಹೇಳಿದ್ದಾರೆ.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಬಲಿಷ್ಠ ಮತ್ತು ಕೆಲಸ ಮಾಡುವ ಸರ್ಕಾರವನ್ನು ರಚಿಸುವುದಾಗಿ ಭರವಸೆಯನ್ನು ನೀಡಿದ್ದೆ. ಅದರಂತೆ ಈ ಸರ್ಕಾರವು ಈ ಹಿಂದಿದ್ದ ಸರ್ಕಾರಕ್ಕಿಂತಲೂ ವೇಗವಾಗಿ ಕೆಲಸ ಮಾಡಲಿದೆ. ನಿಮ್ಮೆಲ್ಲ ಆಕಾಂಕ್ಷೆಗಳನ್ನು ನನಸಾಗಿಸಲು ಈ ಸರ್ಕಾರ ಶ್ರಮಿಸಲಿದೆ. ನಮ್ಮ 100 ದಿನದ ಆಡಳಿತ ಕೇವಲ ಟ್ರೈಲರ್‌ ಅಷ್ಟೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಸಿನಿಮಾ ಬರಲಿದೆ ಎಂದು ಹೇಳಿದರು.

ನಮ್ಮ ಸರ್ಕಾರವು ದೇಶದ ಎಲ್ಲ ವಲಯದಲ್ಲೂ ಸಂಪೂರ್ಣ ಪ್ರಗತಿ ಸಾಧಿಸಲು ಬದ್ಧವಾಗಿದೆ. ಹಾಗೆಯೇ ದೇಶವನ್ನು ಲೂಟಿ ಮಾಡುವವರಿಗೆ ತಕ್ಕ ಶಿಕ್ಷೆ ನೀಡುತ್ತದೆ. ಅಭಿವೃದ್ಧಿಯೇ ನಮ್ಮ ಭರವಸೆ ಹಾಗೂ ಉದ್ದೇಶವಾಗಿದೆ. ಈ ಹಿಂದೆ ದೇಶ ಇಷ್ಟೊಂದು ವೇಗದಲ್ಲಿ ಅಭಿವೃದ್ಧಿ ಕಾಣುವುದನ್ನು ಕಂಡಿಲ್ಲ. ಇದೇ ವೇಳೆಯಲ್ಲಿ ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದ ಕುಸಿತ ಆರಂಭವಾಗಿದೆ. ಯಾರು ಸಾರ್ವಜನಿಕರನ್ನು ಲೂಟಿ ಮಾಡುತ್ತಾರೋ ಅವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡುತ್ತೇವೆ ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಹಲವಾರು ವಿವಾದಾತ್ಮಕ ಶಾಸನಗಳಾದ ತ್ರಿವಳಿ ತಲಾಕ್​ ಮತ್ತು ಮಾಹಿತಿ ಹಕ್ಕು(ತಿದ್ದುಪಡಿ) ಮಸೂದೆಯನ್ನು ಕೆಲವೇ ವಾರಗಳಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗುವಂತೆ ಮಾಡಿತು. ಆ. 5ರಂದು ಆರ್ಟಿಕಲ್‌ 370ರ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತು. ನೂತನ ಸರ್ಕಾರದ ಅಡಿಯಲ್ಲಿ ನಡೆದ ಮುಂಗಾರು ಅಧಿವೇಶನವು ಕಳೆದ ದಶಕಗಳಲ್ಲೇ ಅತ್ಯಂತ ಫಲಪ್ರದ ಅಧಿವೇಶನಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿತು. (ಏಜೆನ್ಸೀಸ್)

2 Replies to “ಇದು ಕೇವಲ ಟ್ರೈಲರ್‌ ಅಷ್ಟೆ, ಪಿಕ್ಚರ್‌ ಇನ್ನು ಬಾಕಿ ಇದೆ ಎಂದು ಸರ್ಕಾರದ ಸಾಧನೆ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ”

Leave a Reply

Your email address will not be published. Required fields are marked *