ಧಾರವಾಡ: ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಉದ್ದೇಶವಿಲ್ಲ. ಆದರೆ, ಸರ್ಕಾರ ಜಾರಿಗೆ ತಂದ ಹೊಸ ಮಾರ್ಗಸೂಚಿಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯಕ್ತ ಸುರೇಶ ಇಟ್ನಾಳ ತಿಳಿಸಿದರು.
ಪಾಲಿಕೆ ಆಯವ್ಯಯಕ್ಕೆ ಜನರಿಂದ ಸಲಹೆ ಸ್ವೀಕರಿಸುವ ನಿಟ್ಟಿನಲ್ಲಿ ಧಾರವಾಡ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 3 ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಬೇಕು. ಕಳೆದ ವರ್ಷ ಹೆಚ್ಚಿಸಿದ್ದರಿಂದ ಈ ಬಾರಿ ಹೆಚ್ಚಳ ಮಾಡುವುದಿಲ್ಲ. ಸರ್ಕಾರ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಮಾರ್ಗಸೂಚಿ ಹೊರಡಿಸಿದೆ. ಆ ಮಾರ್ಗಸೂಚಿ ಪ್ರಕಾರ ತೆರಿಗೆ ಕುರಿತು ಜನರಿಗೆ ತಿಳಿವಳಿಕೆ ನೀಡಲಾಗುವುದು ಎಂದರು.
ಪಾಲಿಕೆ ಆಸ್ತಿಗಳ ಮಾರಾಟ ನಡೆಸಿಲ್ಲ. ಅವಳಿ ನಗರದ ಕೆಲವೆಡೆ ವಾಣಿಜ್ಯ ಮಳಿಗೆ ಹಾಗೂ ನಿವೇಶನಗಳನ್ನು ಲೀಸ್ಗೆ ನೀಡಲಾಗಿತ್ತು. ಅವುಗಳಿಂದ ಆದಾಯ ಬರುತ್ತಿಲ್ಲ. ಕೆಲ ಮಳಿಗೆಗಳು ಹಾಳಾಗಿದ್ದು, ಅಂತಹವನ್ನು ಹರಾಜು ನಡೆಸಲಾಗುತ್ತದೆ. ನಿವೇಶನಗಳಲ್ಲಿ ಮನೆ ನಿರ್ವಿುಸಿದವರಿಗೆ ಅವುಗಳನ್ನು ಸೂಕ್ತ ಬೆಲೆಯಲ್ಲಿ ಅವರ ಹೆಸರಿಗೆ ಮಾಡಿಕೊಟ್ಟು ಆದಾಯ ಹೆಚ್ಚಿಸಲು ಚಿಂತಿಸಲಾಗಿದೆ ಎಂದರು.
ಅವಳಿನಗರದ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರು ಪಾಲಿಕೆ ಜಾಗ ಲೀಸ್ ಮೇಲೆ ಪಡೆದಿದ್ದು, ಅವುಗಳ ನವೀಕರಣವೂ ನಡೆದಿಲ್ಲ. ಅಂತಹ ಜಾಗ ಗುರುತಿಸಿ ಪಾಲಿಕೆ ಸುಪರ್ದಿಗೆ ಪಡೆಯುವುದು, ಇಲ್ಲವೆ ನವೀಕರಣ ಮಾಡಿ ಆದಾಯ ಬರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಧಾರವಾಡಕ್ಕೆ ಅಂದಾಜು 75 ಕೋಟಿ ರೂ. ಪ್ರತ್ಯೇಕ ಅನುದಾನವಿದೆ. ಅದರಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ನಗರದ 78 ಕಡೆಗಳಲ್ಲಿ ಶೌಚಗೃಹ ನಿರ್ವಿುಸಲು ಸರ್ವೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ಇರುವ ಶೌಚಗೃಹ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಲಾಭವನವನ್ನು ಜನರ ಬಳಕೆಗೆ ನೀಡಲು ಶೀಘ್ರದಲ್ಲೇ ಬಾಡಿಗೆ ಪರಿಷ್ಕರಿಸಲಾಗುವುದು. ಎಲ್ಲ ವಲಯ ಕಚೇರಿ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸಲು ಸೂಚಿಸಲಾಗುವುದು. ಆಯವ್ಯಯಕ್ಕೆ ಸಂಬಂಧಿಸಿದ ಸೂಚನೆ, ಸಲಹೆಗಳನ್ನು ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದು ಎಂದರು.
ಮಹಾವೀರ ಶಿವಣ್ಣವರ ಮಾತನಾಡಿ, ಆಸ್ತಿ ತೆರಿಗೆ ಹಾಗೂ ನೀರಿನ ಬಿಲ್ ವಸೂಲಿ ಸರಿಯಾಗಿ ನಡೆಯುತ್ತಿಲ್ಲ. ಬಾಕಿ ವಸೂಲಿಗೆ ಒಂದು ಸೂಕ್ತ ವ್ಯವಸ್ಥೆ ಮಾಡಬೇಕು. ಇದರ ಜತೆಗೆ ಜನರಿಗೆ ಸರಿಯಾಗಿ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಶ್ರೀನಗರದ ಅಶೋಕ ಕುಂಬಾರಿ ಮಾತನಾಡಿ, ಆಸ್ತಿ ತೆರಿಗೆ ಹೆಚ್ಚಳ ಅನಿಯಂತ್ರಿತವಾಗಿದೆ. ಅದನ್ನು ಸರಿ ಮಾಡುವ ಕೆಲಸ ಮಾಡಬೇಕು. ಮನೆ ಮನೆಯಿಂದ ಕಸ ಸಂಗ್ರಹ, ನಗರ ಸ್ವಚ್ಛತೆ ಕಾರ್ಯಗಳಲ್ಲಿನ ಸಮಸ್ಯೆ ಪರಿಹರಿಸುವ ಕೆಲಸವಾಗಲಿ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಿದರೆ ಅನುಕೂಲ. ಈ ವಿಷಯದಲ್ಲಿ ತಾವೂ ಸಹ ಸರ್ಕಾರದ ಜತೆ ಮಾತುಕತೆ ನಡೆಸಬೇಕು ಎಂದು ಆಯುಕ್ತರಿಗೆ ಮನವಿ ಮಾಡಿದರು.
ಜಿ.ಬಿ. ಬಿಂಗೆ ಮಾತನಾಡಿ, ನಗರದಲ್ಲಿ ನಿರ್ವಿುಸಿರುವ ಕಾಂಕ್ರೀಟ್ ರಸ್ತೆಗಳ ಪಕ್ಕ ಪೇವರ್ಸ್ ಹಾಕದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಲಯ ಕಚೇರಿವಾರು ಜನ ಸಂಪರ್ಕ ಸಭೆ ನಡೆಸಬೇಕು. ಇನ್ನು ಕೆಲವರು ವಾಣಿಜ್ಯ ಮಳಿಗೆ ಲೀಸ್ ಪಡೆದು ಮತ್ತೊಬ್ಬರಿಗೆ ನೀಡಿ ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ, ಪಾಲಿಕೆಗೆ ಸೂಕ್ತ ವರಮಾನ ಬರುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಸೇರಿ ಇತರರು ಮಾತನಾಡಿ, ಬಡಾವಣೆಗಳಲ್ಲಿನ ರಸ್ತೆ, ಉದ್ಯಾನ, ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಸೂಕ್ತ ಅನುದಾನ ಒದಗಿಸಬೇಕು ಎಂದರು. ಉಪ ಆಯುಕ್ತ ಎ.ಆರ್. ದೇಸಾಯಿ, ಅಧಿಕಾರಿಗಳು, ಇತರರು ಇದ್ದರು.
ಸಭೆಗೆ ಬೆರಳೆಣಿಕೆಯಷ್ಟು ಜನ
ಪಾಲಿಕೆ ಆಯವ್ಯಯಕ್ಕೆ ಸಂಬಂಧಿಸಿದ ಅಹವಾಲು ಸ್ವೀಕೃತಿಗೆಂದು ಕರೆದ ಸಭೆಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದ್ದರು. ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣಕ್ಕೆ ಹೆಚ್ಚಿನ ಜನರು ಆಗಮಿಸಿಲ್ಲ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಮುಂಚಿತವಾಗಿ ಮಾಹಿತಿ ತಿಳಿಸುವಂತೆ ಸಭೆಗೆ ಬಂದವರು ಸಲಹೆ ನೀಡಿದರು.
ಅವಳಿ ನಗರದ ವಾಣಿಜ್ಯ ಮಳಿಗೆಗಳಿಂದ ಸರಿಯಾಗಿ ಬಾಡಿಗೆ ಸಂದಾಯವಾಗುತ್ತಿಲ್ಲ. ಅವುಗಳನ್ನು ಸರಿಯಾಗಿ ವಸೂಲಿ ಮಾಡಿದರೆ ಪಾಲಿಕೆ ಆದಾಯ ಹೆಚ್ಚಲಿದೆ. ನಿರ್ವಹಣೆಯೂ ಸಾಧ್ಯವಾಗಲಿದೆ. ಧಾರವಾಡದಲ್ಲಿ ಮಿಚಗಿನ್ ಕಾಂಪೌಂಡ್, ಕೂರ್ಪಾಲಿಸ್ ಕಾಂಪೌಂಡ್, ಕೆಲ ಶಿಕ್ಷಣ ಸಂಸ್ಥೆ ಸೇರಿ ಒಟ್ಟು 17 ಕಡೆಗಳಲ್ಲಿ ಸುಮಾರು 400 ಎಕರೆ ಜಾಗ ಲೀಸ್ ಮೇಲೆ ನೀಡಲಾಗಿದೆ. ಪಾಲಿಕೆ ಆಸ್ತಿ ಉಳ್ಳವರ ಪಾಲಾಗದಂತೆ ಗಮನ ಹರಿಸಬೇಕು.
| ಲಕ್ಷ್ಮಣ ಬಕ್ಕಾಯಿ, ಸಾಮಾಜಿಕ ಕಾರ್ಯಕರ್ತ