ಈ ಬಾರಿ ಎಂಒ4 ತಳಿ ಬಿತ್ತನೆ ಬೀಜ ಕೊರತೆಯಿಲ್ಲ

ಉಡುಪಿ: ಕಳೆದೆರಡು ವರ್ಷದಿಂದ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ಸಮಸ್ಯೆ ತಲೆದೋರಿತ್ತು. ಕಳೆದ ವರ್ಷ ಮುಖ್ಯಮಂತ್ರಿಗಳ ಫೋನ್-ಇನ್ ಕಾರ್ಯಕ್ರಮದಲ್ಲಿ ರೈತರೊಬ್ಬರು ಎಂಒ 4 ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ದೂರಿದ್ದರು. ಈ ಬಾರಿ ಅಂತಹ ಸಮಸ್ಯೆ ತಲೆದೋರದಂತೆ ಕೃಷಿ ಇಲಾಖೆ ಮುಂಜಾಗ್ರತೆ ವಹಿಸಿ ಎಂಒ4 ಬಿತ್ತನೆ ಬೀಜವನ್ನು ಮುಂಗಾರು ಆರಂಭಕ್ಕೆ ಮೊದಲೇ ಪೂರೈಸಿದೆ.

ಮುಂಗಾರು ಮಳೆ ಆರಂಭಕ್ಕೆ ಮುನ್ನ ಕೃಷಿ ಚಟುವಟಿಕೆಗೆ ಬೇಕಾದ ಎಲ್ಲ ಸೌಕರ್ಯ ಒದಗಿಸಲು ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಗತ್ಯ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಎಂಒ4 ಕೆಂಪು ತಳಿಯ ಕಜೆ ಅಕ್ಕಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ತಳಿಯನ್ನೇ ರೈತರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಮಳೆಗಾಲ ಶುರುವಾದ ಬಳಿಕ ಉಮಾ (ಎಂಒ16) ಮತ್ತು ಎಂಟಿ-1001, ಜಯ ಮತ್ತು ಕಡಿಮೆ ಅವಧಿಯಲ್ಲಿ ಬೆಳೆಯುವ ಜ್ಯೋತಿ ತಳಿಯ ಬೀಜಗಳನ್ನೂ ವಿತರಿಸಲಾಗುತ್ತದೆ.

9 ರೈತ ಸಂಪರ್ಕ ಕೇಂದ್ರಗಳು: ಉಡುಪಿ, ಕೋಟ, ಬ್ರಹ್ಮಾವರ, ಕಾಪು, ಕುಂದಾಪುರ, ಬೈಂದೂರು, ವಂಡ್ಸೆ, ಕಾರ್ಕಳ ಮತ್ತು ಅಜೆಕಾರು ಹೀಗೆ ಜಿಲ್ಲೆಯಲ್ಲಿ 9 ರೈತ ಸಂಪರ್ಕ ಕೇಂದ್ರಗಳಿವೆ. ಇಲ್ಲಿ ಖರೀದಿಸುವ ಒಂದು ಕೆ.ಜಿ. ಎಂಒ4 ಬಿತ್ತನೆ ಬೀಜಕ್ಕೆ 30.50 ರೂ. ದರವಿದೆ. ಸಾಮಾನ್ಯ ರೈತರಿಗೆ 8 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 12 ರೂ. ಸಹಾಯಧನ ನೀಡಿ ಬೀಜ ವಿತರಿಸಲಾಗುತ್ತದೆ. ಜತೆಗೆ ಕೃಷಿಯಂತ್ರಗಳನ್ನೂ ಬಾಡಿಗೆಗೆ ನೀಡಲಾಗುತ್ತಿದ್ದು, ರೈತರು ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2900 ಕ್ವಿಂಟಾಲ್ ಬೇಡಿಕೆ: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2940 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯಿದೆ. 2900 ಕ್ವಿಂಟಾಲ್ ಎಂಒ4 ತಳಿಯ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 40 ಕ್ವಿಂಟಾಲ್ ಉಳಿದ ತಳಿಗಳ ಬೀಜಗಳನ್ನು ವಿತರಿಸಲಾಗುತ್ತದೆ. ಪ್ರಸ್ತುತ ಎಂಒ4 ತಳಿಯ 1500 ಕ್ವಿಂ. ಬಿತ್ತನೆ ಬೀಜ ವಿವಿಧ ರೈತ ಸಂಪರ್ಕ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದ್ದು, ಈಗಾಗಲೇ 450 ಕ್ವಿಂಟಾಲ್ ಬೀಜ ವಿತರಿಸಲಾಗಿದೆ.

ರಸಗೊಬ್ಬರ ದಾಸ್ತಾನು: ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7121.94 ಟನ್ ರಸಗೊಬ್ಬರ ವಿತರಣೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಯೂರಿಯಾ, ಡಿಎಪಿ, ಎಂಒಪಿ ಮತ್ತು ಎನ್‌ಪಿಕೆ ಒಟ್ಟು 857.64 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಈಗಾಗಲೇ ವಿವಿಧ ರೈತ ಸಂಪರ್ಕ ಕೇಂದ್ರ, ಸಹಕಾರಿ ವ್ಯವಸಾಯ ಉತ್ಪನ್ನ ಮಾರಾಟ ಸಂಸ್ಥೆಗಳಲ್ಲಿ 376.50 ಟನ್ ರಸಗೊಬ್ಬರ ವಿತರಣೆಯಾಗಿದೆ.

ದ.ಕ. ಬೀಜ-ಗೊಬ್ಬರ ಸಂಗ್ರಹ ಸಾಕಷ್ಟು: ಮುಂಗಾರು ಆರಂಭ ವಿಳಂಬವಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿ ಈಗಾಗಲೇ ಪ್ರಾರಂಭಿಸಿದ್ದಾರೆ. ಭತ್ತ ಬಿತ್ತನೆ ಬೀಜ ಸಾಕಷ್ಟು ಪೂರೈಕೆಯಾಗಿದ್ದು, ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳಲ್ಲಿ 5 ಸಾವಿರ ಕ್ವಿಂಟಾಲ್ ಎಂಒ4, ಜಯಾ, ಜ್ಯೋತಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.

ರೈತರು ಮಂಗಳೂರು ಬಿ., ಗುರುಪುರ, ಮೂಡುಬಿದಿರೆ, ಮೂಲ್ಕಿ, ಸುರತ್ಕಲ್, ಬಂಟ್ವಾಳದ ಪಾಣೆಮಂಗಳೂರು, ಬಂಟ್ವಾಳ ಕಸಬಾ, ವಿಟ್ಲ, ಪುತ್ತೂರಿನ ಪುತ್ತೂರು ಕಸಬಾ, ಉಪ್ಪಿನಂಗಡಿ, ಕಡಬ, ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ, ವೇಣೂರು, ಕೊಕ್ಕಡ, ಸುಳ್ಯದ ಸುಳ್ಯ ಕಸಬಾ, ಪಂಜದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಎಂಒ4ಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಈ ಬಾರಿ ಪೂರೈಕೆ ಹೆಚ್ಚಿಸಲಾಗಿದೆ. 126 ಕ್ವಿಂಟಾಲ್ ಬಿತ್ತನೆ ಬೀಜ ರೈತರಿಗೆ ವಿತರಿಸಿ ಆಗಿದೆ. ಸುಮಾರು 2ಸಾವಿರ ಟನ್‌ನಷ್ಟು ರಸಗೊಬ್ಬರ ಸ್ಟಾಕ್ ಮಾಡಿ ಇಡಲಾಗಿದೆ. ರೈತರಿಂದ ಬೇಡಿಕೆ ಬಂದಂತೆ ವಿತರಣೆ ನಡೆಯುತ್ತಿದೆ.

ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. ಕರ್ನಾಟಕ ಸೀಡ್ ಕಾರ್ಪೊರೇಶನ್‌ನಿಂದ ಜಿಲ್ಲೆಗೆ ಬಿತ್ತನೆ ಬೀಜ ಪೂರೈಕೆಯಾಗಿದೆ. ಕಳೆದ ವರ್ಷ ಎಂಒ4 ತಳಿಯ ಬಿತ್ತನೆ ಬೀಜದ ಕೊರತೆಯಾಗಿತ್ತು. ಈ ಬಾರಿ ಬೇಕಾದಷ್ಟು ಪ್ರಮಾಣದಲ್ಲಿ ಬೀಜ ಲಭ್ಯವಿದೆ.
-ಎಚ್.ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

Leave a Reply

Your email address will not be published. Required fields are marked *