ಹುದ್ದೆ ಡೀಲ್ ಮಾಡಲು ಉಪನ್ಯಾಸಕರಿಬ್ಬರು ಆಡಿಯೋದಲ್ಲಿ ನಡೆಸಿರುವ ಸಂಭಾಷಣೆ ಹೀಗಿದೆ…

| ದೇವರಾಜ್ ಎಲ್. ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯ ಬ್ಯಾಕ್​ಲಾಗ್ ಹುದ್ದೆಗಳ ಡೀಲ್​ಗೆ ಪುಷ್ಟಿ ನೀಡುವ ಆಡಿಯೋ ಬಹಿರಂಗಗೊಂಡಿದೆ. ಆ ಮೂಲಕ ಅಕ್ರಮಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯವರು ಬ್ಯಾಕ್​ಲಾಗ್ ಹುದ್ದೆ ಗುರುತಿಸಲು ವಿವಿಗೆ ಆಗಮಿಸಿದ ವೇಳೆ ನಡೆದ ಚರ್ಚೆ ಇದು ಎನ್ನಲಾಗಿದೆ.

ಗೋಲ್‍ಮಾಲ್ ವರದಿ: ಬ್ಯಾಕ್​ಲಾಗ್ ಹುದ್ದೆಗಳನ್ನು ಗುರುತಿಸುವಾಗಲೇ ಗೋಲ್‍ಮಾಲ್ ನಡೆದಿರುವುದು ಆಡಿಯೋನಲ್ಲಿ ಸ್ಪಷ್ಟವಾಗಿದೆ. ಬ್ಯಾಕ್​ಲಾಗ್ ಹುದ್ದೆಗಳನ್ನು ಗುರುತಿಸುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯದ್ದು. ಈ ಇಲಾಖೆ ಅಧಿಕಾರಿಗಳ ತಂಡ ಬೆಂವಿವಿಗೆ ಭೇಟಿ ನೀಡಿ ಖಾಲಿ ಹುದ್ದೆಗಳನ್ನು ಗುರುತಿಸಿದೆ. ಈ ವೇಳೆ ಲಂಚ ಪಡೆದು ಬೇಕಾದ ವಿಭಾಗಗಳಲ್ಲಿ ಹಾಲಿ ಭರ್ತಿಯಾಗಿರುವ ಹುದ್ದೆಗಳನ್ನೇ ಖಾಲಿ ಎಂದು ತೋರಿಸಲಿದೆ ಎಂದು ಸಂಭಾಷಣೆ ನಡೆಸಲಾಗಿದೆ.

ಏನಿದೆ ಕ್ಲಿಪ್​ನಲ್ಲಿ?: ಬೆಂವಿವಿಯಲ್ಲೇ ಸಾಕಷ್ಟು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಉಪನ್ಯಾಸಕರು ಪರಸ್ಪರ ಡೀಲ್ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರಾತ್ರಿ 8-9 ಗಂಟೆಯವರೆಗೂ ಇಲಾಖೆಯಲ್ಲಿ ಇದ್ದರು. ನಾವು ಹುದ್ದೆ ಸೃಷ್ಟಿಗೆ ತಗಾದೆ ತೆಗೆದು ಇದನ್ನು ಮಾಡಬೇಕಾದಲ್ಲಿ ಕನಿಷ್ಠ 1 ಲಕ್ಷ ರೂ. ಹಾಗೂ ಹುದ್ದೆ ವರ್ಗಾವಣೆಗೆ ಕನಿಷ್ಠ 2 ಲಕ್ಷ ರೂ. ಲಂಚ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆಂದು ಮಾತನಾಡಿಕೊಂಡಿದ್ದಾರೆ.

ಮೌನ ವಹಿಸಿದ ಸಚಿವರು: ಬ್ಯಾಕ್​ಲಾಗ್ ಹುದ್ದೆ ಭರ್ತಿಗಾಗಿ ಡೀಲ್ ನಡೆಯುತ್ತಿರುವ ಕುರಿತು ವಿಜಯವಾಣಿ ‘ವಿವಿ ಬ್ಯಾಕ್​ಲಾಗ್ ಹುದ್ದೆ ಡೀಲ್’ ಶೀರ್ಷಿಕೆ ಅಡಿ ಜ.10ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದರ ಆಧಾರದ ಮೇಲೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತನಿಖಾ ಸಮಿತಿ ರಚಿಸುವುದಾಗಿ ತಿಳಿಸಿದರು. ಆದರೆ, ಈವರೆಗೆ ಸಮಿತಿ ರಚನೆಯಾಗಿಲ್ಲ.

ಡೀಲ್ ಬಗ್ಗೆ ಉಪನ್ಯಾಸಕರು ಮಾತನಾಡಿದ ಪ್ರಮುಖ ಅಂಶ

ದಿನೇಶ್: ಸಮಾಜ ಕಲ್ಯಾಣ ಇಲಾಖೆಯವರು ಹುದ್ದೆ ಸೃಷ್ಟಿಸಲು ಲಂಚ ಕೇಳುತ್ತಿದ್ದಾರೆ.

ಮಹದೇವ್: ಎಷ್ಟು ಕೇಳುತ್ತಾರೆ, ಕಮ್ಮಿ ಆದ್ರೆ ಕೊಡಬಹುದು.

ದಿನೇಶ್: ಒಂದು ಹುದ್ದೆ ಸೃಷ್ಟಿಗೆ 1 ಲಕ್ಷ ರೂ. ಕೇಳುತ್ತಿದ್ದಾರೆ.

ಮಹದೇವ್: ಅಷ್ಟೊಂದು ದುಡ್ಡು ಕೊಡಲು ಸಾಧ್ಯವಿಲ್ಲ. ಏನೋ 20-30 ಸಾವಿರ ರೂ. ಆದ್ರೆ ಓಕೆ

ದಿನೇಶ್: ನಾನು ಕೊಟ್ಟಿದ್ದೇನೆ. ಸಾಲ ಮಾಡಿ 1 ಲಕ್ಷ ರೂ. ನೀಡಿದ್ದೇನೆ.

ಮಹದೇವ್: ಕೇವಲ ಹುದ್ದೆ ಸೃಷ್ಟಿಗೆ ಒಂದು ಲಕ್ಷ ರೂ. ಕಷ್ಟ. ಕೆಲಸ ಫಿಕ್ಸ್ ಮಾಡೋದು ಆದ್ರೆ 5 ಲಕ್ಷ ರೂ. ಕೊಡಲು ಸಿದ್ಧನಿದ್ದೇನೆ.

ದಿನೇಶ್: ಕೆಲಸ ನನಗೆ ಬಿಡು, ನಾನು ಮಾಡಿಸುತ್ತೇನೆ.

ದಿನೇಶ್: ವಿವಿ ಕೇಸ್ ವರ್ಕರ್ 25 ಸಾವಿರ ರೂ.ಕೇಳುತ್ತಿದ್ದಾನೆ.

ಬ್ಯಾಕ್​ಲಾಗ್ ಡೀಲ್ ಆರೋಪಕ್ಕಾಗಿ ಭರ್ತಿ ಪ್ರಕ್ರಿಯೆ ನಿಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ನೀತಿಸಂಹಿತೆ ಇರುವುದರಿಂದ ನಿಲ್ಲಿಸಿದ್ದೇವೆ. ಚುನಾವಣಾ ಆಯೋಗದಿಂದ ಒಪ್ಪಿಗೆ ಸಿಕ್ಕರೆ ಭರ್ತಿ ಮಾಡುತ್ತೇವೆ.

| ಕೆ.ಆರ್. ವೇಣುಗೋಪಾಲ್ ಬೆಂವಿವಿ ಕುಲಪತಿ