ಮೇ 23, 24, 25 ಅಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗುವುದಿಲ್ಲ: ಡಿಸಿಎಂ ಡಾ. ಜಿ. ಪರಮೇಶ್ವರ್​

ಕಲಬುರಗಿ: ಮೇ 23 ಅಲ್ಲ, 24, 25 ಆದರೂ ಸರಿ. ಮುಂದಿನ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗಲ್ಲ. ಬಿ.ಎಸ್​. ಯಡಿಯೂರಪ್ಪ ಎಷ್ಟೇ ಜಪ ಮಾಡಿದರೂ ಸರ್ಕಾರಕ್ಕೇನೂ ಆಗುವುದಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್​ ಹೇಳಿದ್ದಾರೆ.

ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು. ಜೆಡಿಎಸ್​ನಲ್ಲಿ ಎಚ್​.ಡಿ. ರೇವಣ್ಣನಂತವರು ಕೂಡ ಸಿಎಂ ಆಗಲು ಅವಕಾಶವಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್​ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಎಚ್​.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಮುಂದಿನ ಸಿಎಂ ಯಾರು ಎಂಬ ಹೇಳಿಕೆಗಳು ಅಪ್ರಸ್ತುತ. ಅಂತ ಹೇಳಿಕೆಗಳು ಕೇವಲ ಸಾಂದರ್ಭಿಕವಾದವು ಎಂದು ಹೇಳಿದರು.

ಉಮೇಶ್​ ಜಾಧವ್​ ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ಹೋಗಿದ್ದು ಏಕೆ ಅನ್ನೋದು ಜನರಿಗೆ ಈಗಾಗಲೆ ಗೊತ್ತಾಗಿದೆ. ಇಂತಿಷ್ಟು ದುಡ್ಡು, ಮಗನಿಗೆ ಟಿಕೆಟ್​ ಎಂಬ ಷರತ್ತು ಹಾಕಿ ಬಿಜೆಪಿಗೆ ಹೋಗಿದ್ದಾರೆ ಎಂದು ತಿಳಿಸಿದರು.