ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಪುತ್ರಿ ಬಿಬಿ ಫಾತಿಮಾ- ಹಜರತ್ ಅಲಿ ದಂಪತಿಗೆ ಇಬ್ಬರು ಪುತ್ರರು. ಒಬ್ಬರು ಇಮಾಮಹಸನ್, ಮತ್ತೊಬ್ಬರು ಇಮಾಮಹುಸೇನ್. ಈ ಪೈಕಿ ಇಮಾಮಹುಸೇನ್ ಅವರು ಪೈಗಂಬರರ ತತ್ವಾದರ್ಶಗಳನ್ನು ಪಾಲಿಸುತ್ತ ಬದುಕಿನಲ್ಲಿ ಮುನ್ನಡೆಯುತ್ತಾರೆ. ಸತ್ಯ, ನಿಷ್ಠೆಯ ಹಾದಿಯಲ್ಲಿ ಸಾಗುತ್ತಾರೆ. ಇಸ್ಲಾಂ ಧರ್ಮ ಪ್ರಸಾರ ಮಾಡುತ್ತಾರೆ. ಪೈಗಂಬರರು ಅಮರರಾದ ನಂತರ, ನಾಲ್ಕನೇ ಖಲೀಫ್ರಾದವರು ಅಳಿಯ ಹಜರತ್ ಅಲಿ. ಇವರ ನಂತರ ಆ ಸ್ಥಾನಕ್ಕೆ ಏರಬೇಕಿದ್ದವರೇ ಇಮಾಮಹುಸೇನ್. ಆಗ, ಅರಬ್ ರಾಜನಾಗಿದ್ದ ಯಜೀದ್ ಮಧ್ಯ ಪ್ರವೇಶಿಸುತ್ತಾನೆ. ಅಧಿಕಾರದ ಆಸೆಗಾಗಿ ಇಸ್ಲಾಂ ಧರ್ಮದ ತತ್ತ್ವಗಳನ್ನೇ ತನಗೆ ಹೊಂದಾಣಿಕೆಯಾಗುವಂತೆ ಮಾರ್ಪಡಿಸಲು ಪ್ರಯತ್ನಿಸುತ್ತಾನೆ. ತನ್ನ ಮಾತು ಪಾಲಿಸುವಂತೆ ಇಮಾಮಹುಸೇನ್ರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಾನೆ. ಹಲವು ಕಟ್ಟುಪಾಡುಗಳನ್ನು ಹೇರಲು ಮುಂದಾಗುತ್ತಾನೆ.
ತನ್ನನ್ನು ವಿರೋಧಿಸಿದ ಇಮಾಮಹಸನ್ ಸೇವಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲುತ್ತಾನೆ. ಸಹೋದರನ ಸಾವಿನಿಂದಲೂ ಧೃತಿಗೆಡದ ಇಮಾಮಹುಸೇನ್ ಹೋರಾಟ ಮುಂದುವರಿಸುತ್ತಾರೆ. ಧರ್ಮದ ಹಾದಿಯಲ್ಲೇ ಸಾಗುತ್ತಾರೆ. ಆಗ ವಿಚಲಿತನಾದ ಯಜೀದ್ ಸಂಧಾನಕ್ಕಾಗಿ ಆಹ್ವಾನಿಸುತ್ತಾನೆ. ‘ನೀನು ಮದ್ಯ ಸೇವಿಸುತ್ತೀಯ, ಸುಳ್ಳುಗಾರನಿದ್ದೀಯ. ಸಾಲುಸಾಲಾಗಿ ಕೆಟ್ಟ ಕೆಲಸಗಳನ್ನೇ ಮಾಡಿದ್ದೀಯ. ನಾನು ನಿನ್ನ ಮಾತು ಕೇಳುವುದಿಲ್ಲ. ನಿನ್ನೊಂದಿಗೆ ಕೈಜೋಡಿಸುವುದಿಲ್ಲ’ ಎಂದು ಇಮಾಮಹುಸೇನ್ ಖಡಾಖಂಡಿತವಾಗಿ ಉತ್ತರಿಸುತ್ತಾರೆ. ಆಗ, ಇಬ್ಬರ ಮಧ್ಯೆ ವೈಷಮ್ಯ ಬೆಳೆಯುತ್ತದೆ. ಬಳಿಕ ಯಜೀದ್ನ ಕಾಟದಿಂದ ಬೇಸತ್ತ ಇಮಾಮಹುಸೇನ್ ತಮ್ಮ 72 ಅನುಯಾಯಿಗಳೊಂದಿಗೆ ಅರಬ್ ರಾಷ್ಟ್ರವನ್ನು ತೊರೆಯಲು ನಿರ್ಧರಿಸುತ್ತಾರೆ. ಪವಿತ್ರ ಕ್ಷೇತ್ರಗಳಾದ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ‘ಧಾರ್ವಿುಕ ಕ್ಷೇತ್ರದಲ್ಲೇ ಖುಷಿಯಿಂದ ಬದುಕುವುದು, ಇಲ್ಲವೇ ಪ್ರಾಣ ಬಿಟ್ಟು ಅಲ್ಲಾಹನ ಪ್ರೀತಿಗೆ ಪಾತ್ರವಾಗುವುದು’ ಅವರ ಉದ್ದೇಶವಾಗಿತ್ತು. ಆಗ, ಕರಬಲಾದಲ್ಲಿ ಅಡ್ಡಿಪಡಿಸಿದ ಯಜೀದ್ನ ಸೈನಿಕರು ಅನುಯಾಯಿಗಳ ಹತ್ಯೆ ಮಾಡುತ್ತಾರೆ.
ಇದೇ ಘಟನೆಯಲ್ಲಿ ಇಮಾಮಹುಸೇನ್ರ 6 ತಿಂಗಳ ಮಗು ಅಲಿ ಅಸಗರ್ ಸಾವನ್ನಪ್ಪುತ್ತದೆ. ಆದರೂ, ಹಿಂದೆ ಸರಿಯದ ಇಮಾಮಹುಸೇನ್ ಹೋರಾಟ ಮುಂದುವರಿಸುತ್ತಾರೆ. ಅವರಿಗೆ ಅನ್ನ-ನೀರು ನೀಡದೆ ಯಜೀದ್ ಚಿತ್ರಹಿಂಸೆ ನೀಡುತ್ತಾನೆ. ಮೊಹರಂ ತಿಂಗಳ 10ನೇ ದಿನ (ಶುಕ್ರವಾರ) ನಮಾಜ್ ಮಾಡುತ್ತಿದ್ದ ವೇಳೆ ಯಜೀದ್ನ ಸೈನಿಕರು ಶಿರಚ್ಛೇದ ಮಾಡುತ್ತಾರೆ. ಆಗ ಇಮಾಮಹುಸೇನ್ ಅಮರರಾಗುತ್ತಾರೆ. ಧರ್ಮಕ್ಕಾಗಿ ಇಷ್ಟೊಂದು ಜನ ಪ್ರಾಣಬಿಟ್ಟರೂ, ಸತ್ಯ, ನಿಷ್ಠೆ ಮಾತ್ರ ಸಾಯುವುದಿಲ್ಲ. ಈ ಘಟನೆಯ ನೆನಪಿಗಾಗಿ ಪ್ರತಿವರ್ಷ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಲ್ಲಿ ಜಗತ್ತಿನಾದ್ಯಂತ ಮೊಹರಂ ಆಚರಿಸಲಾಗುತ್ತದೆ. ಪಂಝಾಗಳನ್ನು ಪ್ರತಿಷ್ಠಾಪಿಸಿ, ಡೋಲಿ ಸಿದ್ಧಪಡಿಸಲಾಗುತ್ತದೆ. ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಲಾಗುತ್ತದೆ. ಮೊಹರಂಗೂ ತಿಂಗಳ ಮುನ್ನವೇ ಹಳ್ಳಿಗಳಲ್ಲಿ ಸಿದ್ಧತೆ ಶುರುವಾಗುತ್ತದೆ. ಮುಸ್ಲಿಮರ ಜತೆಗೆ, ಹಿಂದುಗಳೂ ಕೈಜೋಡಿಸುತ್ತಾರೆ. ಸಿಹಿ ಪದಾರ್ಥ (ಚೋಂಗೆ) ಸಿದ್ಧಪಡಿಸಿ ಪಂಝಾಗಳಿಗೆ ನೈವೇದ್ಯ ಅರ್ಪಿಸುತ್ತಾರೆ. ಡೋಲಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಭಾವೈಕ್ಯದ ಈ ಕ್ಷಣಗಳಿಗೆ ಸಾವಿರಾರು ಜನ ಸಾಕ್ಷಿಯಾಗುತ್ತಾರೆ. ಮೊಹರಂ ಕಡೇ ದಿನ ಪಂಝಾಗಳನ್ನು ನದಿಗೆ ಕಳುಹಿಸುವ ಮೂಲಕ ಹಬ್ಬ ಸಮಾಪ್ತಿಗೊಳ್ಳುತ್ತದೆ.
ಮೊಹರಂ ಸಂದರ್ಭದಲ್ಲಿ ಮಸೀದಿಗಳಲ್ಲೂ ಹಬ್ಬದ ಇತಿಹಾಸ ಸಾರಲಾಗುತ್ತದೆ. ಇಮಾಮಹುಸೇನ್ರ ಅದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ ತಳಹದಿಯಲ್ಲೇ ಬದುಕು ಸಾಗಿಸಬೇಕೆಂದು ತಿಳಿಹೇಳಲಾಗುತ್ತದೆ. ಮುಸ್ಲಿಮರು ತಮ್ಮ ಹಿತೈಷಿಗಳಿಗೆ, ಗೆಳೆಯರಿಗೆ ಕುಡಿಯುವ ನೀರು, ಶರಬತ್ ನೀಡಿ ದಾಹ ನೀಗಿಸಬೇಕೆಂಬ ನಿಯಮವಿದೆ. ಸಂಕಷ್ಟದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಬೇಕು. ಅಲ್ಲಾಹನ ಹೆಸರಲ್ಲಿ ಉಪವಾಸ ವ್ರತ (ರೋಜಾ) ಕೈಗೊಳ್ಳಬೇಕು. ಪವಿತ್ರ ಕುರಾನ್ ಗ್ರಂಥ ಪಠಿಸಿ ಇಸ್ಲಾಂನ ಆಚರಣೆಗಳ ಬಗ್ಗೆ ಅಭ್ಯಸಿಸಬೇಕು. ಇಮಾಮಹುಸೇನ್ರ ಅನುಯಾಯಿಗಳನ್ನು ನೆನೆಯಬೇಕು ಎಂಬ ನಿಯಮಗಳಿವೆ.