2 ಎಕರೆಯಲ್ಲಿ 216 ಟನ್ ಕಬ್ಬು!

ಬರಗಾಲ, ಅಂತರ್ಜಲ ಕುಸಿತ, ಬತ್ತುತ್ತಿರುವ ಕೆರೆಕಟ್ಟೆಗಳು, ಸಾಲ ಬಾಧೆಗಳಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಆದರೆ, ಸಮಸ್ಯೆಗಳ ನಡುವೆಯೂ ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ರೈತ ರಾಮಪ್ಪ ಹನುಮಂತ ಉಪ್ಪಾರ ಹಾಗೂ ಲಕ್ಷ್ಮಣ ಉಪ್ಪಾರ ಸಹೋದರರು ಸತತ 3-4 ವರ್ಷ ಎಕರೆಗೆ 100 ಟನ್ ಕಬ್ಬು ಬೆಳೆದು ಭಲೇ ಎನಿಸಿಕೊಂಡಿದ್ದಾರೆ.

ತುಕ್ಕಾನಟ್ಟಿ ಗ್ರಾಮ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದರೂ ಉಪ್ಪಾರ ಸಹೋದರರು ಹಲವು ವರ್ಷಗಳಿಂದ ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದಾರೆ. ತೂಕ ವಂಚನೆ, ಅವಧಿ ಮೀರಿ ಕಬ್ಬು ಕಟಾವು, ಕಬ್ಬಿನ ಬಿಲ್ ಬಾಕಿ, ಸರ್ಕಾರದ ದ್ವಂದ್ವ ನಿಲುವು ಹಾಗೂ ಬೆಂಬಲ ಬೆಲೆ ನೀಡದ್ದರಿಂದ ಬೆಳಗಾವಿ ಜಿಲ್ಲೆಯ ರೈತರು ಕಬ್ಬಿನ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಉಪ್ಪಾರ ಸಹೋದರರು ಇದಾವುದನ್ನೂ ಲೆಕ್ಕಿಸದೆ ನೂತನ ಪ್ರಯೋಗದ ಮೂಲಕ ಭರ್ಜರಿ ಇಳುವರಿ ಪಡೆಯುತ್ತಿದ್ದಾರೆ.

ಭೂಮಿಯೇ ಪ್ರಯೋಗ ಶಾಲೆ: ಉಪ್ಪಾರ ಸಹೋದರರು ಉತ್ತಮ ಇಳುವರಿ ಪಡೆಯಲು ಹೊಸ ಹೊಸ ಕಬ್ಬಿನ ತಳಿ ನಾಟಿ ಮಾಡುವ ಮೂಲಕ ಭೂಮಿಯನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿರುವ ಕಬ್ಬು ತಳಿ ಸಂಶೋಧನೆ ಸಂಸ್ಥೆಯಿಂದ ಎಸ್​ಎನ್​ಕೆ ಎಂಬ ಕಬ್ಬಿನ ತಳಿಯನ್ನು ತಂದು 10 ಗುಂಟೆ ಹೊಲದಲ್ಲಿ ನಾಟಿ ಮಾಡಿದ್ದರು. ಅದೇ ಗದ್ದೆಯಲ್ಲಿ ಏಳೆಂಟು ಕಬ್ಬು ಹೊಂದಿದ್ದ ಅಪರೂಪದ ಗಡ್ಡೆಯೊಂದು (9293) ಕಣ್ಣಿಗೆ ಬಿತ್ತು. ಇದು ಎಸ್​ಎನ್​ಕೆಗಿಂತ ಸುಮಾರು 5-6 ಅಡಿ ಎತ್ತರ ಬೆಳೆದಿತ್ತು. ಅದೇ ಕಬ್ಬನ್ನು ಕಟಾವು ಮಾಡಿ ಒಂಟಿ ಕಣ್ಣಿನ ಪದ್ಧತಿಯಲ್ಲಿ ನಾಟಿ ಮಾಡಿ ಪ್ರತಿ ವರ್ಷ ಎಕರೆ 100 ಟನ್ ಇಳುವರಿ ಪಡೆಯುತ್ತಿದ್ದಾರೆ. ಉಪ್ಪಾರ ಸಹೋದರರ ಕೃಷಿ ಸಾಧನೆ ಕಂಡ ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಅಧಿಕಾರಿಗಳು ಹಾಗೂ ಸಂಕೇಶ್ವರದ ಕಬ್ಬು ತಳಿ ಸಂಶೋಧನೆ ಕೇಂದ್ರ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಅದೇ ಕಬ್ಬಿನಿಂದ ಸಸಿಗಳನ್ನು ನಾಟಿ ಮಾಡಿ ರೈತರಿಗೆ ವಿತರಿಸುತ್ತಿದ್ದಾರೆ.

ಪಟ್ಟಾ ಪದ್ಧತಿ: ಉಪ್ಪಾರ ಸಹೋದರರು ಪಟ್ಟಾ ಪದ್ಧತಿ ಅಳವಡಿಸಿಕೊಂಡು ಹಲವು ವರ್ಷಗಳಿಂದ 9293 ತಳಿ ಕಬ್ಬು ಬೆಳೆಯುತ್ತಿದ್ದಾರೆ. ಒಂಟಿ ಕಣ್ಣಿನ ಬೀಜವನ್ನು ಸಾಲಿನಿಂದ ಸಾಲಿಗೆ 6 ಅಡಿ ಹಾಗೂ ಬೀಜದಿಂದ ಬೀಜಕ್ಕೆ 2 ಅಡಿ ಅಂತರದಲ್ಲಿ ನಾಟಿ ಮಾಡುತ್ತಾರೆ. ಎರಡು ತಿಂಗಳ ಬಳಿಕ ತಾಯಿ ಕಬ್ಬು ಮುರಿದು ಮರಿಗಳ ಪೋಷಣೆ ಮಾಡುತ್ತಿದ್ದಾರೆ. ಹೀಗೆ ಮುರಿದ ತಾಯಿ ಕಬ್ಬಿನಿಂದ 8ರಿಂದ 9 ಮರಿಕಬ್ಬು ಹುಟ್ಟಿಕೊಳ್ಳುತ್ತವೆ. ಮರಿಕಬ್ಬು ಹೆಚ್ಚಾದಂತೆ ಇಳುವರಿಯೂ ಅಧಿಕವಾಗುತ್ತದೆ. ನೀರಿನ ಅಭಾವ ತೀವ್ರವಾಗಿದ್ದರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಬರಗಾಲ, ಬಾಕಿ ಬಿಲ್ ಹಾಗೂ ಬೆಂಬಲ ಬೆಲೆ ನೀಡದಿರುವುದರಿಂದ ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ರೈತರು ಕಬ್ಬಿನ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ನಾವು ಕಳೆದ ವರ್ಷ ಎರಡು ಎಕರೆಗೆ 205 ಟನ್ ಬೆಳೆದಿದ್ದು, ಈ ವರ್ಷ 216 ಟನ್ ಕಬ್ಬು ಬೆಳೆದಿದ್ದೇವೆ.

| ರಾಮಪ್ಪ ಹನುಮಂತಪ್ಪ ಉಪ್ಪಾರ, ಕಬ್ಬು ಬೆಳೆಗಾರ

ಹೊಲದಲ್ಲೇ ಕೊಟ್ಟಿಗೆ ನಿರ್ಮಾಣ

ಉಪ್ಪಾರ ಸಹೋದರರು ಜಮೀನಿನಲ್ಲೇ ಕೊಟ್ಟಿಗೆ ನಿರ್ವಿುಸಿ ಎರೆಹುಳ ಗೊಬ್ಬರ ತಯಾರಿಸುತ್ತಾರೆ. ಗೋಮೂತ್ರದಲ್ಲಿ ಬೇವು, ಸೀತಾಫಲ, ಹಾಗಲ, ಚದರಂಗಿ ತಪ್ಪಲು ಮಿಶ್ರಣ ಮಾಡಿ (ಜೀವಾಮೃತ) ಡ್ರಿಪ್ ಮೂಲಕ ಬೆಳೆಗಳಿಗೆ ನೀಡುತ್ತಾರೆ. ಜಮೀನಿನಲ್ಲಿಯೇ ಕಬ್ಬಿಗೆ ಬೇಕಾದ ಗೊಬ್ಬರ ತಯಾರಿಸುವುದರಿಂದ ವೆಚ್ಚ ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 9916690149 ಸಂರ್ಪಸಬಹುದು.

| ಅಕ್ಕಪ್ಪ ಮಗದುಮ್ಮ, ಬೆಳಗಾವಿ