ಸಾಹಸ, ತ್ಯಾಗದ ಪ್ರತೀಕ ಚಿತ್ರದುರ್ಗದ ಈ ದುರ್ಗಿ

Onake Obavva

ಒನಕೆ ಓಬವ್ವ ನಿಸ್ವಾರ್ಥದ ನಾಡಪ್ರೇಮ, ನಾಡಪ್ರಭುವಿಗಾಗಿ ಒನಕೆಯನ್ನೇ ಆಯುಧವನ್ನಾಗಿ ಹಿಡಿದು ಶತ್ರುಗಳ ನಿರ್ನಾಮ ಮಾಡಿದ್ದರಿಂದಾಗಿ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾಳೆ. ಓಬವ್ವ ಜಯಂತಿಯನ್ನು ಸರ್ಕಾರ ಆಚರಿಸುವುದು ಇಡೀ ನಾರಿಕುಲಕ್ಕೆ ಸಂದ ಗೌರವ.

BL venuಡಾ. ಬಿ.ಎಲ್. ವೇಣು
ಗಂಡುಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗವನ್ನು ಗಂಗರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಶಾತವಾಹನರು, ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದರಾದರೂ ವಿಜಯನಗರದ ಪತನಾನಂತರ 13 ಮಂದಿ ಪಾಳೇಗಾರರು 211 ವರ್ಷಗಳ ಕಾಲ ದುರ್ಗವನ್ನು ಆಳಿ ತಮ್ಮ ಶೌರ್ಯ-ಪರಾಕ್ರಮಗಳಿಂದಲೂ, ದೈವಭಕ್ತಿಯಿಂದಲೂ ಹೆಸರಾದವರು. ಚಿತ್ರದುರ್ಗವೆಂದರೆ ಪಾಳೇಗಾರರು, ಪಾಳೇಗಾರರೆಂದರೆ ಚಿತ್ರದುರ್ಗವೆಂದೇ ಜನಮನದಲ್ಲಿ ಅಚ್ಚಳಿಯದೆ ಉಳಿದವರು. ಕೊನೆಯ ದೊರೆ ಮದಕರಿ ನಾಯಕ ಕ್ರಿ.ಶ. 1754ರಿಂದ 1779ರವರೆಗೆ ಧೀರೋದಾತ್ತನಾಗಿ ಆಳಿ ಹೈದರಾಲಿಯಂತಹ ಸಮರ್ಥ ನವಾಬನ ಮೇಲೆ ಯುದ್ಧ ಸಾರಿದ ಗಂಡುಗಲಿ, ರಣಕಲಿ.

ಈತನ ಕಾಲಮಾನದಲ್ಲೇ ಹೈದರಾಲಿ ನವಾಬನ ಮೇಲೆ ನಡೆದ ಯುದ್ಧದಲ್ಲಿ ಒಂದು ದಿನದ ಜಯಕ್ಕೆ ಆಕಸ್ಮಿಕವಾಗಿ ಕಾರಣಳಾಗಿ ದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವೆಗೂ ದುರ್ಗದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಬಹುಮುಖ್ಯವಾಗಿ ರಾಜನಿಷ್ಠೆ, ನಾಡಪ್ರೇಮ, ಸಮಯಪ್ರಜ್ಞೆ, ಅಪರಿಮಿತ ಧೈರ್ಯ, ಸಾಹಸ ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ದಾಖಲಾದ ವೀರ ವನಿತೆ ಈಕೆ.

ಓಬವ್ವ ರಾಣಿಯೇನಲ್ಲ, ಕೋಟೆಕಾವಲಿನ ಕಹಳೆ ಮದ್ದಹನುಮಪ್ಪನ ಹೆಂಡತಿ. ತವರೂರು ಗುಡೆಕೋಟೆ. ದುರ್ಗದ ಸೊಸೆಯಾಗಿ ಬಂದ ಈಕೆಯ ಮನೆ ಇದ್ದದ್ದು ಈಗಿನ ಒನಕೆ ಕಿಂಡಿಯ ಸನಿಹವೇ ಎನ್ನುತ್ತಾರೆ ಇತಿಹಾಸಕಾರರು.

ಹೈದರಾಲಿಯು ದುರ್ಗವನ್ನು ವಶಪಡಿಸಿಕೊಳ್ಳಲು ಸದಾ ತವಕಿಸುತ್ತಿದ್ದ. ಕ್ರಿ.ಶ. 1762, 1774, 1777 ಹೀಗೆ ಸತತವಾಗಿ ಮೂರು ಬಾರಿ ದಂಡೆತ್ತಿ ಬಂದು, ನಿರಾಶನಾಗಿ ಹಿಂದಿರುಗಿದ್ದ. 1779ರಲ್ಲಿ ನೇರವಾಗಿ ಕಾದಾಡುವ ಬದಲು ಕುಟಿಲೋಪಾಯದಿಂದ ಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿ ಗೂಢಚಾರರನ್ನು ನೇಮಿಸಿದ. ವಾಯವ್ಯ ದಿಕ್ಕಿನಲ್ಲಿ ಕೋಟೆಯ ಸಾಲಲ್ಲೊಂದು ಕಳ್ಳಗಿಂಡಿ ಕಂಡಾಗ ಸುಲಭವಾಗಿ ಒಳಗೆ ನುಸುಳುವ ಸಂಚು ರೂಪಿಸಿ ಸೇನೆಯನ್ನು ಕಳುಹಿಸಿದ ನರಿ ಬುದ್ಧಿಯವ.

ಒಬ್ಬರು ಮಾತ್ರವೇ ನುಸುಳಬಹುದಾದ ಕಿಂಡಿಯ ಬಳಿಯೇ ಓಬವ್ವೆಯ ಮನೆ. ಮಧ್ಯಾಹ್ನದ ವೇಳೆ ಆಕೆಯ ಪತಿ ಕೋಟೆಯ ಕಾವಲಿನಲ್ಲಿ ನಿರತನಾಗಿದ್ದುದು ದೂರದ ಕಹಳೆ ಬತೇರಿಯ ಮೇಲೆ. ಇತ್ತ ಹೈದರಾಲಿಯ ಸೇನಾ ಪಡೆ ಹೊಂಚು ಹಾಕಿ ಕಿಂಡಿಯ ಮೂಲಕ ಕೋಟೆಯ ಒಳ ನುಸುಳಲು ಉದ್ಯುಕ್ತವಾಯಿತು.

ಮನೆಯಲ್ಲಿ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗಾಗಿ ಕಾಯುತ್ತಿದ್ದ ಓಬವ್ವೆ, ಗಂಡ ಬರುವುದು ತಡವಾದ್ದರಿಂದ ಏನು ತುರ್ತು ಇದೆಯೋ ಎಂದು ಭಾವಿಸಿ ಮಗುವನ್ನು ಮಲಗಿಸಿ, ನೆರೆಯ ಮನೆಯವರಿಂದ ಕಾಳು ಕುಟ್ಟಲು ತಂದಿದ್ದ ಒನಕೆಯನ್ನು ಕೊಟ್ಟು ಬರಲು ಹೊರಟಳು.

ಕಳ್ಳ ಕಿಂಡಿಯ ಮುಂದೆ ಹಾದು ಹೋಗುವಾಗ ಅಸ್ಪಷ್ಟ ಮಾತುಗಳು ಕೇಳಿ ಬಂದವಲ್ಲದೆ ಕತ್ತಿ ಗುರಾಣಿಗಳ ಶಬ್ದ, ಕುದುರೆಗಳ ಕಲರವ ಕೇಳಿ ಬಂದಾಗ ಜಾಗೃತವಾದಳು. ಕಳ್ಳಗಿಂಡಿಯತ್ತ ಬಾಗಿ ನೋಡಿದಾಗ ಒಬ್ಬ ನುಸುಳುತ್ತಿರುವುದು ಗೋಚರವಾಯಿತು. ಅವನ ಹಿಂದೆ ಹಲವರು ಕಂಡಾಗ ಇದು ಶತ್ರುಗಳ ಹುನ್ನಾರವೆಂದು ಯೋಚಿಸಿ, ಸಮಯ ವ್ಯರ್ಥ ಮಾಡದೆ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ, ವೀರಗಚ್ಚೆ ಹಾಕಿ ತನ್ನ ಕೈಯಲ್ಲಿದ್ದ ಒನಕೆಯಿಂದಲೇ ಶತ್ರುಗಳ ತಲೆ ಒಡೆಯಲು ಸನ್ನದ್ಧಳಾಗಿ ನಿಂತಳು.

ಕಿಂಡಿಯಲ್ಲಿ ಒಬ್ಬೊಬ್ಬರಾಗಿ ತೂರಿ ಬಂದಾಗ ಅಳುಕದೆ ಮನದಲ್ಲಿ ತಾಯಿ ಏಕನಾಥಿ, ಉಚ್ಚಂಗಿಯನ್ನು ನೆನೆದು ಮೈಯಲ್ಲಿನ ಕಸುವೆಲ್ಲ ಒಗ್ಗೂಡಿಸಿ, ಒಳನುಗ್ಗುವವರ ತಲೆಯ ಮೇಲೆ ಒನಕೆಯಿಂದ ಪ್ರಹಾರ ಮಾಡಿ ತಲೆಯನ್ನು ಛಿದ್ರಗೊಳಿಸಿ, ದರ್ರನೆ ಪಕ್ಕಕ್ಕೆಳೆದು ಬಿಸಾಡಿದಳು. ರಣಚಂಡಿಯಂತೆ ಶತ್ರುಸಂಹಾರಕ್ಕೆ ನಿಂತು ದುರ್ಗದ ದುರ್ಗಿಯಾಗಿ ನೂರಾರು ಶತ್ರುಗಳ ತಲೆ ಒಡೆದು ಬಿಸಾಡುತ್ತ ಮೈಮರೆತಳು. ಇದೇ ಸಮಯಕ್ಕೆ ಊಟಕ್ಕೆ ಬಂದಿದ್ದ ಪತಿ ಮದ್ದಹನುಮಪ್ಪ ರಾಶಿರಾಶಿ ಹೆಣಗಳನ್ನು, ಒನಕೆ ಹಿಡಿದು ರಕ್ತಸಿಕ್ತಳಾದ ಹೆಂಡತಿಯನ್ನು ಕಂಡು, ಎರಗಿದ ಆಪತ್ತನ್ನು ಗ್ರಹಿಸಿದ. ಒಡನೆಯೇ ಯುದ್ಧಕಹಳೆಯನ್ನು ಮೊಳಗಿಸಿ, ತನ್ನ ಸೇನೆಯವರಿಗೆ ಶತ್ರುಗಳ ಪ್ರವೇಶವಾಗಿರುವುದನ್ನು ಸೂಚಿಸಿದ.

ಆಪದ್ಗಹಳೆಯ ಶಬ್ದ ಕೇಳುತ್ತಲೇ ಸಾಗರದೋಪಾದಿಯಲ್ಲಿ ಸೇನೆ ನುಗ್ಗಿ ಬಂದು, ಶತ್ರುಗಳ ಮುಖಾಮುಖಿಯಾಯಿತು. ಘನಘೊರ ಯುದ್ಧವಾಗಿ ಹೈದರಾಲಿ ಸೇನೆ ದಿಕ್ಕಾಪಾಲಾಗಿ ಓಡಿತು. ಶತ್ರುಗಳ ಸಂಹಾರ ಮಾಡಿ ಬಳಲಿದ್ದ ಓಬವ್ವೆ ಹೆಣದ ರಾಶಿಯ ಮೇಲೆ ಉರುಳಿ ಮೂರ್ಛಿತಳಾದಳು. ಸೈನಿಕರು, ಮದ್ದಹನುಮಪ್ಪ ಅವಳನ್ನೆತ್ತಿ ಅರಮನೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿದರು. ಆಕೆ ಬದುಕುಳಿದಳು. (ಸಿನಿಮಾ ಕಥೆಗಳಲ್ಲಿ ಚಿತ್ರಿಸುವಂತೆ ಆಕೆ ಅಲ್ಲಿಯೇ ಅಸುನೀಗುವುದು, ಹೈದರಾಲಿ ಸೈನಿಕನೊಬ್ಬ ಅವಳನ್ನು ಇರಿದು ಕೊಲ್ಲುವುದೂ ಇಲ್ಲ. ಈ ಪ್ರಕರಣದ ನಂತರ ಎರಡು ವರ್ಷ ಓಬವ್ವೆ ಬದುಕಿದ್ದಳು.)

ಓಬವ್ವಳ ಸಾಹಸ ತಿಳಿದ ಮದಕರಿ ನಾಯಕ ಅಪ್ರತಿಭನಾದ. ಅರಸನಿಂದ ಜನಸಾಮಾನ್ಯರವರೆಗೂ ಎಲ್ಲರ ಪ್ರಶಂಸೆಗೆ ಆಕೆ ಪಾತ್ರಳಾದಳು. ಮದಕರಿ ನಾಯಕನು ಓಬವ್ವೆ ಮತ್ತು ಆಕೆಯ ಬಂಧುಗಳನ್ನು ರಾಜಸಭೆಗೆ ಆಹ್ವಾನಿಸಿ, ‘ದುರ್ಗದ ಕೋಟೆಯನ್ನು ರಕ್ಷಿಸಿದ ತಾಯಿ’ ಎಂದು ಆಕೆಯನ್ನು ಶ್ಲಾಘಿಸಿ ಆಗಸನಕಲ್ಲು ಗ್ರಾಮವನ್ನು ಜಹಗೀರಾಗಿ ನೀಡಿದ. ಜಲಧಿ ಉತ್ಸವದಲ್ಲಿ ಮಂದಲವಂಶದವರಿಗೆ ‘ಓಬವ್ವೆ ವೀಳ್ಳೆ’ ನೀಡಿ ಗೌರವಿಸಲು ಆದೇಶಿಸಿದ. ಪಟ್ಟೆ ಪೀತಾಂಬರಗಳಿಂದ ಆಕೆಯನ್ನು ಅಲಂಕರಿಸಿ ದುರ್ಗದ ತುಂಬ ದೊರೆಯೇ ಸ್ವತಃ ನಿಂತು ಮೆರವಣಿಗೆ ಮಾಡಿಸಿದ ಎಂದು ಓಬವ್ವೆಯ ವಂಶಸ್ಥರಾದ ಪೊ›. ಎ.ಡಿ. ಕೃಷ್ಣಯ್ಯ ತಮ್ಮ ‘ವೀರವನಿತೆ ಓಬವ್ವ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಓಬವ್ವೆಯ ವಂಶಸ್ಥರು ದುರ್ಗ, ಗೋಸಿಕೆರೆ, ಗುಡೆಕೋಟೆ, ಅಗಸನಕಲ್ಲು ಇತ್ಯಾದಿ ಕಡೆಗಳಲ್ಲಿ ಈಗಲೂ ನೆಲೆಸಿರುವುದುಂಟು. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿ ಓಬವ್ವೆಯ ದೇವಸ್ಥಾನವಿದ್ದು, ಆಕೆ ನೂರಾರು ಶತ್ರುಗಳ ತಲೆಯೊಡೆದ ಒನಕೆಯನ್ನು ಸಂಗ್ರಹಿಸಿಡಲಾಗಿದೆ. ನಿತ್ಯವೂ ಪೂಜೆ ಪುರಸ್ಕಾರಗಳನ್ನು ಆಕೆಯ ವಂಶಜರೆನ್ನುವ ಎ.ಡಿ. ನರಸಿಂಹಯ್ಯ, ರುದ್ರೇಶ ಪೂಜಾರ್ ನೆರವೇರಿಸುತ್ತಿದ್ದುದುಂಟು. ಇದೀಗ ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಅವರ ಉಸ್ತುವಾರಿಯಲ್ಲಿ ಪುಟ್ಟ ದೇವಾಲಯ ಪ್ರವಾಸಿಗರ ಮನ ಸೆಳೆಯುತ್ತಿದೆ. ದುರ್ಗದ ಛಲವಾದಿಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ತಾವು ಓಬವ್ವೆಯ 7ನೇ ತಲೆಮಾರಿನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.

ಚರಿತ್ರೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ, ರಾಣಿ ಅಬ್ಬಕ್ಕ ಮತ್ತು ದುರ್ಗದ ರಾಣಿ ಓಬಳವ್ವನಾಗತಿ ಇವರೆಲ್ಲ ಶತ್ರುಗಳ ವಿರುದ್ಧ ಸೆಣಸಾಡಿದ ವೀರಾಗ್ರಣಿಗಳೇ. ಇಂಥ ವೀರ ವನಿತೆಯರ ಸಾಲಿಗೆ ಓಬವ್ವೆಯು ಸೇರುತ್ತಾಳೆಂಬುದು ಗರ್ವಾಭಿಮಾನದ ಸಂಗತಿ. ಮೇಲೆ ಉಲ್ಲೇಖಿಸಿದ ರಾಣಿಯರೆಲ್ಲ ತಮ್ಮ ರಾಜ್ಯಕೋಶ, ಪಟ್ಟಪದವಿಗಳಿಗಾಗಿ ಹೋರಾಡಿದ್ದಾರೆ. ಆದರೆ ಓಬವ್ವೆ ಸಾಮಾನ್ಯ ಹೆಣ್ಣುಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೆ ಅಲ್ಲ, ಕನ್ನಡ ನಾಡಿಗೇ ಹೆಮ್ಮೆಯ ಮನೆಮಗಳಾಗಿದ್ದಾಳೆ.

(ಲೇಖಕರು ಹಿರಿಯ ಸಾಹಿತಿ)

ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?

Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court​ ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…