More

    ಹೆಣ್ಣುಮಕ್ಕಳಿಗೆ ಹೆಗಲಾದ ದಂಪತಿ; ನೂರಾರು ಹುಡುಗಿಯರ ಪೋಷಕರಿವರು

    ಹೆಣ್ಣು ಹುಟ್ಟಿತೆಂದರೆ ಬೇಸರ ಪಟ್ಟುಕೊಳ್ಳುವವರು, ಭ್ರೂಣದಲ್ಲಿಯೇ ಅದನ್ನು ಹೊಸಕಿ ಹಾಕುವವರೂ ಅನೇಕ ಮಂದಿ. ಇಂಥ ಪರಿಸ್ಥಿತಿಯ ನಡುವೆ ಎಲ್ಲಿಯೋ ಹುಟ್ಟಿ ಬೆಳೆದ ಹೆಣ್ಣುಮಕ್ಕಳನ್ನು ಕರೆತಂದು ಅವರಿಗೆ ವಿದ್ಯಾದಾನ ಮಾತ್ರವಲ್ಲದೇ, ಉಚಿತವಾಗಿ ಊಟ- ವಸತಿಯನ್ನೂ ಕಲ್ಪಿಸಿ, ತಮ್ಮ ಕಾಲಿನ ಮೇಲೆ ನಿಲ್ಲುವಂತೆ ಮಾಡುತ್ತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಕಾರ್ಕಳದ ಪಾಟಕ್ ದಂಪತಿ.

    ಈಶಾನ್ಯ ಭಾಗದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್​ಗಳು ಸಪ್ತ ಸಹೋದರಿ ರಾಜ್ಯವೆಂದೇ ಪ್ರಸಿದ್ಧಿ. ತನ್ನ ಒಡಲೊಳಗೆ ಸೌಂದರ್ಯದ ಖನಿಯನ್ನೇ ಅಡಗಿಸಿಕೊಂಡಿರುವ ಈ ರಾಜ್ಯಗಳಲ್ಲಿ ಅಸಂಖ್ಯ ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಮಾತ್ರ ಮರೀಚಿಕೆ. ಅದರಲ್ಲಿಯೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಎಲ್ಲಾ ಕುಟುಂಬಗಳೂ ಬಡತನದಲ್ಲಿಯೇ ಮುಳುಗಿವೆ. ಒಂದೆಡೆ ಬಡತನ, ಇನ್ನೊಂದೆಡೆ ದೂರದೂರದಲ್ಲಿ ಇರುವ ಶಾಲೆಗಳು… ಇಂಥ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದು ಎಂದರೆ ಹೆಣ್ಣುಹೆತ್ತ ಪಾಲಕರಿಗೆ ಅರಗಿಸಿಕೊಳ್ಳಲಾಗದ ತುತ್ತೇ. ಅದಕ್ಕಾಗಿಯೇ ಆದಷ್ಟು ಬೇಗ ಹೆಣ್ಣುಮಕ್ಕಳ ಮದುವೆ ಮಾಡಿ ‘ಕೈತೊಳೆದುಕೊಳ್ಳುವ’ ಆಸೆ ಅನೇಕ ಪಾಲಕರದ್ದು.

    ಆದರೆ, ಇಂದು ಅಲ್ಲಿ ನೂರಾರು ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದಾರೆ, ಅಷ್ಟೇ ಏಕೆ? ವಿವಿಧ ಪದವಿ, ಸ್ನಾತಕೋತ್ತರ ಪದವಿ ಪಡೆದು ಉದ್ಯೋಗವನ್ನೂ ದಕ್ಕಿಸಿಕೊಂಡಿದ್ದಾರೆ. ಕೈತುಂಬಾ ಸಂಬಳ ಪಡೆದು ತಮ್ಮ ಮನೆಯ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡು ಅಪ್ಪ-ಅಮ್ಮನ ಮುದ್ದಿನ ಕಣ್ಮಣಿಗಳಾಗಿದ್ದಾರೆ!

    ಹೌದು! ಯಾರೂ ಊಹಿಸಲಾಗದ ಅದ್ಭುತ ಪರಿವರ್ತನೆ ಈ ಗುಡ್ಡಗಾಡು ಪ್ರದೇಶದಲ್ಲಾಗಿದೆ. ಉತ್ತರ ಭಾರತದಲ್ಲಿನ ಮೂಲೆಯಲ್ಲಿ ಇಂಥದ್ದೊಂದು ಮಹತ್ತರ ಬದಲಾವಣೆಗೆ ಕಾರಣವಾಗಿದ್ದು, ದಕ್ಷಿಣ ಭಾರತದ ದಂಪತಿ ಎಂದರೆ ಅಚ್ಚರಿಯಾಗುತ್ತದೆಯಲ್ಲವೆ? ಇಂಥ ಮಹತ್ಕಾರ್ಯ ಮಾಡುತ್ತಿರುವ ಶ್ರೇಯಸ್ಸು ಉಡುಪಿ ಜಿಲ್ಲೆಯ ಕಾರ್ಕಳದ ವಿಘ್ನೇಶ್ ಪಾಟಕ್ ಹಾಗೂ ಜ್ಯೋತಿ ಪಾಟಕ್ ದಂಪತಿಗೆ ಸೇರುತ್ತದೆ.

    ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್​ಎಸ್​ಎಸ್) ಅಂಗಸಂಸ್ಥೆಯಾದ ಸೇವಾ ಭಾರತ ಸಂಸ್ಥೆಯ ಕಾರ್ಯದರ್ಶಿಯಾಗಿರುವ ವಿಘ್ನೇಶ್ ತಮ್ಮ ಪತ್ನಿಯ ಜತೆಗೂಡಿ ಕಳೆದ 12 ವರ್ಷಗಳಿಂದ ಉತ್ತರ ಭಾರತದ ಹೆಣ್ಣುಮಕ್ಕಳಿಗೆ ಪೋಷಕರಾಗಿ, ಜ್ಞಾನ ನೀಡುವ ಶಿಕ್ಷಕರಾಗಿ, ಈ ಮಕ್ಕಳಿಗೆ ಊಟ- ವಸತಿಯನ್ನು ನೀಡುವ ರಕ್ಷಕರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣದಿಂದ ವಂಚಿತರಾದ ಸಹಸ್ರಾರು ಮಕ್ಕಳನ್ನು ಹುಡುಕಿ, ಅವರ ಪಾಲಕರ ಮನವೊಲಿಸಿ ಅವರನ್ನು ಕರೆದುಕೊಂಡು ಬಂದು ವಿದ್ಯಾದಾನ ಮಾಡುವ ದೊಡ್ಡ ಮಟ್ಟದ ಕಾರ್ಯ ಆರ್​ಎಸ್​ಎಸ್ ವತಿಯಿಂದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುತ್ತಿರುವ ಶ್ರೇಯಸ್ಸು ಪಾಟಕ್ ದಂಪತಿಯದ್ದು.

    ಸದ್ಯ 30 ಹುಡುಗಿಯರಿಗೆ ಈ ದಂಪತಿ ಆಶ್ರಯ ನೀಡುತ್ತಿದ್ದಾರೆ. ಈ ಎಲ್ಲಾ ಮಕ್ಕಳ ವಿದ್ಯಾಭ್ಯಾಸದ ಜತೆಗೆ ಊಟ, ವಸತಿಯ ಜವಾಬ್ದಾರಿಯನ್ನೂ ದಂಪತಿಯೇ ನೋಡಿಕೊಳ್ಳುತ್ತಿದ್ದಾರೆ. ಇವರ ಈ ಸತ್ಕಾರ್ಯವನ್ನು ನೋಡಿ ಹಲವಾರು ದಾನಿಗಳು ಸ್ವಯಂ ಪ್ರೇರಿತರಾಗಿ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಹೆಚ್ಚಿನವರು ಗಂಡು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.ಆದರೆ ಹೆಣ್ಣುಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುವುದು ತುಂಬಾ ಕಷ್ಟ. ಹೀಗಿದ್ದರೂ ಈ ದಂಪತಿ ಹೆಣ್ಣು ಮಕ್ಕಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

    ಜ್ಯೋತಿಯವರು ಶಿಕ್ಷಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ನಿಗಾ ವಹಿಸಲು ತಮಗೆ ಸಾಧ್ಯವಾಗುತ್ತದೆ ಎನ್ನುತ್ತಾರೆ. ದಂಪತಿ ಇಬ್ಬರೂ ಈ ಮಕ್ಕಳಿಗೆ ಮನೆಯಲ್ಲಿ ಪಾಠ ಹೇಳಿ ಕೊಡುತ್ತಾರೆ. ಮಕ್ಕಳಿಗೆ ವಿದ್ಯೆ ಮಾತ್ರವಲ್ಲ, ಸ್ವಚ್ಛತೆ, ಶಿಸ್ತು ಕೂಡ ಕಲಿಸಿಕೊಡಲಾಗುತ್ತದೆ. ಈಗಾಗಲೇ ಅನೇಕ ಹೆಣ್ಣುಮಕ್ಕಳಿಗೆ ಇವರು ಪದವಿಯವರೆಗೂ ಓದಿಸಿದ್ದಾರೆ. ಇನ್ನು ಕೆಲವರಿಗೆ ಸ್ನಾತಕೋತ್ತರ ಪದವಿಯನ್ನೂ ಮಾಡಿಸಿದ್ದಾರೆ. ಅವರ ಪೈಕಿ ಹೆಚ್ಚಿನ ಯುವತಿಯರು ತಮ್ಮ ಊರಿಗೆ ವಾಪಸಾಗಿ ಶಿಕ್ಷಕಿ, ನರ್ಸ್ ಹುದ್ದೆ ಸೇರಿದಂತೆ ಹಲವಾರು ಕಡೆ ಕೆಲಸಕ್ಕೆ ಸೇರಿದ್ದಾರೆ.

    ಕಾರ್ಕಳದಲ್ಲಿ ಸೇವಾ ಭಾರತಿಯವರು ನಡೆಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ ಸೇವಾ ಭಾರತಿಯ ಕರ್ನಾಟಕದ ವಿವಿಧ ಶಾಖೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ಮಕ್ಕಳಿಗೆ ಮೂರು ದಿನಗಳ ಶಿಬಿರ ಆಯೋಜಿಸಲಾಗಿತ್ತು. ಸೇವಾ ಭಾರತಿಯ ಸೇವೆಯಿಂದ ಅತ್ಯಂತ ಸಂತಸಗೊಂಡಿದ್ದ ಮಣಿಪುರ ವಿಧಾನಸಭೆಯ ಸಭಾಪತಿ ಶ್ರೀ ಖೇಮ್ಂದ್​ಜೀ ಭಾಗಿಯಾಗಿ ಶುಭ ಹಾರೈಸಿದ್ದು ವಿಶೇಷವಾಗಿತ್ತು. ದಂಪತಿಯ ಈ ಕಾರ್ಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

    ‘ನಿಮಗೆಷ್ಟು ಮಕ್ಕಳು’ ಎಂದು ಪಾಟಕ್ ದಂಪತಿಯನ್ನು ಯಾರಾದರೂ ಕೇಳಿದರೆ ಸ್ವಂತ ಮಕ್ಕಳಿಲ್ಲದ ಈ ದಂಪತಿ, ಸ್ವಲ್ಪವೂ ಅಳುಕಿಲ್ಲದೇ ಸದ್ಯ 50-60 ಇರಬಹುದು ಎನ್ನುತ್ತಾರೆ! ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಪಡಾವೋ, ಬೇಟಿ ಬಚಾವೋ’ ಯೋಜನೆಗೆ ತಮ್ಮದೊಂದು ಅಳಿಲು ಸೇವೆ ಎನ್ನುತ್ತಾರೆ ಜ್ಯೋತಿ.

    ಮನೆ ಮಗಳಾದ ಬಾಲಕಿ

    ಉತ್ತರ ಭಾರತದಿಂದ ಬಾಲಕಿಯೊಬ್ಬಳನ್ನು ವಿದ್ಯಾಭ್ಯಾಸಕ್ಕಾಗಿ ಕರೆತಂದಾಗ ಆರೋಗ್ಯ ತೀರಾ ಹದಗೆಟ್ಟಿತ್ತು. ಇಂಥ ಸಂದರ್ಭದಲ್ಲಿ ಬಹುಶಃ ಬೇರೆಯವರಾಗಿದ್ದರೆ ಆಕೆಯನ್ನು ವಾಪಸ್ ಮನೆಗೆ ಕಳುಹಿಸುತ್ತಿದ್ದರೇನೋ. ಆದರೆ ಜ್ಯೋತಿಯವರು ಹಗಲು ರಾತ್ರಿಯೆನ್ನದೇ ಅಮ್ಮನ ಹಾಗೆ ಬಾಲಕಿಯ ಆರೈಕೆ ಮಾಡಿದರು. ಸ್ವಲ್ಪ ದಿನದಲ್ಲಿಯೇ ಬಾಲಕಿ ಚೇತರಿಸಿಕೊಂಡಳು. ಈಗ ಆಕೆ ಮಕ್ಕಳಿಲ್ಲದ ಪಾಟಕ್ ದಂಪತಿಯ ಮಗಳಾಗಿ ಇಲ್ಲಿಯೇ ನೆಲೆಸಿದ್ದಾಳೆ.

    ಕನ್ಯಾದಾನ ಮಾಡಿದ ದಂಪತಿ

    ಪಾಟಕ್ ದಂಪತಿಯ  ಬಳಿ ಇದ್ದು ಮಣಿಪುರದ ಇಂಫಾಲದ ರೀತಾ ಎಂಬ ಯುವತಿ ಪದವಿ ಮುಗಿಸಿದ್ದಳು. ನಂತರ ಆಕೆ ವಾಪಸ್ ಮನೆಗೆ ಹೋಗಿದ್ದಳು. ಅಲ್ಲಿ ಮದುವೆ ನಿಶ್ಚಯವಾಗಿತ್ತು. ರೀತಾಳಿಗೆ ತಂದೆ ಇಲ್ಲ. ನಿಯಮಾನುಸಾರ ಆಕೆಯ ಸಂಬಂಧಿಕರು ಕನ್ಯಾದಾನ ಮಾಡಬೇಕಿತ್ತು. ಆದರೆ ರೀತಾ ಹಾಗೂ ಆಕೆಯ ತಾಯಿ ಹಾಗೆ ಮಾಡದೇ ತಮ್ಮ ಮಗಳಂತೆ ಸಾಕಿರುವ ಪಾಟಕ್ ದಂಪತಿಯೇ ಕನ್ಯಾದಾನ ಮಾಡಬೇಕೆಂದು ಪಟ್ಟು ಹಿಡಿದರು. ಇದೇ ಕಾರಣಕ್ಕೆ ದಂಪತಿ ಹೋಗಿ ರೀತಾಳ ಕನ್ಯಾದಾನ ಮಾಡಿದರು.

    | ರಜನಿ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts