ಈ ಗ್ರಾಮದಲ್ಲಿರುವುದು ಕೇವಲ 4 ವೋಟುಗಳಷ್ಟೆ!

ಕೊರಿಯಾ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಅರ್ಹರಾದ ಪ್ರತಿ ನಾಗರಿಕರು ತಮ್ಮ ಮತ ಚಲಾಯಿಸುವಂತೆ ಮಾಡಲು ಚುನಾವಣಾ ಆಯೋಗ ಮುಂದಾಗಿದ್ದು, ಮತದಾನ ಹೆಚ್ಚಿಸಲು ಒಂದೇ ಒಂದು ಮತ ಇದ್ದರೂ ಕೂಡ ಮತದಾನದ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನ ಹರಿಸುತ್ತಿದೆ.

ಭರತ್‌ಪುರ – ಸೋನಹತ್‌ ವಿಧಾನಸಭೆ ಕ್ಷೇತ್ರದ ಶೆರಾಂದಂದ್ ಎಂಬ ಗ್ರಾಮದ ಬೂತ್‌ ನಂಬರ್‌ 143ರಲ್ಲಿ ಕೇವಲ ನಾಲ್ಕು ಮತದಾರರಿದ್ದಾರೆ. ಈ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.

ಚುನಾವಣೆ ಅಧಿಕಾರಿ ಎನ್‌ ಕೆ ದುಗ್ಗಾ ಮಾತನಾಡಿ, ಮತದಾನಕ್ಕೆ ಒಂದು ದಿನ ಮುಂಚಿತವಾಗಿಯೇ ಚುನಾವಣೆಗಾಗಿ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮತದಾನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾಡಿನ ಮಧ್ಯ ಭಾಗದಲ್ಲಿರುವ ಗ್ರಾಮದಲ್ಲಿ ಚುನಾವಣೆ ಆಯೋಗದ ತಂಡವು ಬೆಟ್ಟ ಗುಡ್ಡಗಳಿಂದ ಕೂಡಿರುವ ದಾರಿಯಲ್ಲಿ ಐದಾರು ಕಿಮೀ ಸಾಗುವ ಮೂಲಕ ನದಿಯನ್ನು ದಾಟಿ ಸೇರಬೇಕಿದೆ. ನಗರದ ಮುಖ್ಯರಸ್ತೆಯಿಂದ 15 ಕಿಮೀ ದೂರದಲ್ಲಿದೆ ಎಂದು ತಿಳಿಸಿದ್ದಾರೆ.

ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲದಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಅಧಿಕಾರಿಗಳು ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಛತ್ತೀಸ್‌ಗಡದಲ್ಲಿ ಎರಡು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೊದಲನೇ ಹಂತವಾಗಿ ನವೆಂಬರ್‌ 12ರಂದು ಮತ್ತು ಎರಡನೇ ಹಂತವಾಗಿ ನವೆಂಬರ್‌ 20 ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 11ಕ್ಕೆ ಎರಡೂ ಹಂತದ ಮತ ಎಣಿಕೆ ಕಾರ್ಯ ನಡೆಯಲಿದೆ. (ಏಜೆನ್ಸೀಸ್)