ಬೆಂಗಳೂರು: ಮನುಷ್ಯ ತನ್ನ ಭೋಗ ಜೀವನವದ ನಡುವೆ ಪುಣ್ಯ ಸಂಪಾದನೆಗೂ ಗಮನಹರಿಸಬೇಕು. ಮನುಷ್ಯನ ಪುಣ್ಯ ಪ್ರಾಪ್ತಿಗೆ ತೀರ್ಥಯಾತ್ರೆಯೂ ಕಾರಣವಾಗುತ್ತದೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಗಳು ತಿಳಿಸಿದ್ದಾರೆ.
ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನ ಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಧನುರ್ವಸದ ಇಷ್ಟಲಿಂಗ ಮಹಾಪೂಜೆ ಮತ್ತು ಅಧ್ಯಾತ್ಮ ಸಮಾರಂಭದ 3ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಕೇವಲ ಭೋಗ ಜೀವನಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾನೆ. ತಾನು ವಾಸಿಸುವ ಮನೆಯಲ್ಲಿ ವಿಷಯಾಧಾರಿತ ಚಟುವಟಿಕೆಯನ್ನು ಮಾಡುತ್ತಾನೆ. ಆದರೆ ಯಾವ ಭೋಗ ವಸ್ತುಗಳು ಆತನ ಅಂತ್ಯದಲ್ಲಿ ಬರುವುದಿಲ್ಲ. ವ್ಯಕ್ತಿಯ ಕೊನೆಗೂ ಬರುವುದು ಪುಣ್ಯ ಮತ್ತು ಪಾಪ. ಆದ್ದರಿಂದ ಭೋಗ ಜೀವನದ ನಡುವೆಯೂ ಧರ್ಮ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಮನುಷ್ಯನ ಧರ್ಮ ವೃದ್ಧಿಗೆ ಹಲವು ಧರ್ಮಕಾರ್ಯಗಳಿದ್ದು, ಅವುಗಳಲ್ಲಿ ತೀರ್ಥಯಾತ್ರೆಯೂ ಒಂದು. ತೀರ್ಥಯಾತ್ರೆಯಿಂದ ಮನುಷ್ಯನ ಪುಣ್ಯವೃದ್ಧಿಯಾಗುತ್ತದೆ ಎಂದು ಹೇಳಿದರು.
ಡಾ.ಸಿ.ಉಮಾದೇವಿ ಉಮಾಶಂಕರ್ ಅವರ ‘ಪಂಚಕೇದಾರ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ತೀರ್ಥ ಕ್ಷೇತ್ರಗಳಲ್ಲಿ ಶ್ರೇಷ್ಠವಾದ ಕೇದಾರ ಕ್ಷೇತ್ರದ ಯಾತ್ರೆ ಅದ್ಭುತವಾಗಿದ್ದು, ಅಂತಹ ಯಾತ್ರೆ ಮಾಡುವ ವಿಧಾನವನ್ನು ಉಮಾದೇವಿ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದು ಶ್ಲಾಘಿಸಿದರು.
ವಿಭೂತಿಪುರ ಮಠದ ಡಾ. ಮಹಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪುಸ್ತಕದ ಪರಿಚಯ ಮಾಡಿಕೊಟ್ಟರು. ಶಿವಗಂಗೆ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಕೆವಿವಿಎಸ್ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಪ್ರತಿಷ್ಠಾನದ ಅಧ್ಯಕ್ಷ ಜಯಲಿಂಗಪ್ಪ ಮತ್ತಿತರರಿದ್ದರು.