ಶೀಘ್ರ ಬಗೆಹರಿಯಲಿದೆ ಮರಳು ಸಮಸ್ಯೆ

ತೀರ್ಥಹಳ್ಳಿ: ತಾಲೂಕಿನಲ್ಲಿ 15 ಮರಳು ಕ್ವಾರಿಗಳಿಗೆ ಲೀಸ್ ನೀಡಲಾಗಿದ್ದು ಒಂದೆರಡು ದಿನಗಳಲ್ಲಿ ಮರಳಿನ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿ ಕೆ..ದಯಾನಂದ್ ಹೇಳಿದರು.

ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಆಗುಂಬೆಗೆ ಹೋಗುವ ಮಾರ್ಗದಲ್ಲಿ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಗುತ್ತಿಗೆದಾರರು ಮತ್ತು ಲಾರಿ ಮಾಲೀಕರ ನಿಯೋಗದೊಂದಿಗೆ ಮಾತನಾಡಿದರು. ಒಂದು ವಾರದಲ್ಲಿ ಮರಳನ್ನು ತೆಗೆಯುವಂತೆ ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಕ್ವಾರಿ ಇರುವ ಜಾಗದಲ್ಲಿ ಸ್ಟಾಕ್​ಯಾರ್ಡ್​ಗೆ ಜಾಗದ ಸಮಸ್ಯೆ ಮತ್ತು ವೇ ಬ್ರಿಡ್ಜ್ ಮತ್ತು ಸಿಸಿಟಿವಿ ಅಳವಡಿಸಬೇಕಾದ ಕಾರಣ ವಿಳಂಬವಾಗಿದೆ ಎಂದರು.

ಆಗುಂಬೆ ಭಾಗದ ಜನರ ಸಮಸ್ಯೆಗಳು ಅತ್ಯಂತ ಗಂಭೀರವಾಗಿದ್ದು ನನ್ನ ಗಮನದಲ್ಲಿದೆ. ಗ್ರಾಮ ವಾಸ್ತವ್ಯದಲ್ಲಿ ಎಲ್ಲ ಸಮಸ್ಯೆಗಳನ್ನು ಒಮ್ಮೆಲೇ ಬಗೆಹರಿಸುವುದು ಕಷ್ಟ ಸಾಧ್ಯ. ಆದರೆ ಈ ಜನರೊಂದಿಗೆ ಆಡಳಿತ ಇದೆ ಎಂಬ ವಿಶ್ವಾಸವನ್ನು ಮೂಡಿಸುವುದು ಈ ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ ಎಂದು ಹೇಳಿದರು.

ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಭಾಗದ ತಳಮಟ್ಟದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ಮಾಗೋಪಾಯ ಕಂಡುಕೊಳ್ಳಲು ಇದು ಸಹಕಾರಿ. ನಕ್ಸಲ್ ಪ್ಯಾಕೇಜ್ ಹೆಸರಿನಲ್ಲಿ ಈ ಹಿಂದೆ ಅನುದಾನ ಬರುತ್ತಿದ್ದು ಈಚೆಗೆ ಸ್ಥಗಿತಗೊಂಡಿದೆ ಎಂದು ಹೇಳಿದರು.

ಕಾಡುಪ್ರಾಣಿಗಳಿಂದ ಆಗುತ್ತಿರುವ ಹಾನಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅರಣ್ಯ ಇಲಾಖೆಯಿಂದ ಪರಿಹಾರ ವಿತರಣೆ ನಡೆಯುತ್ತಿದ್ದು ಇದು ಸತತವಾಗಿ ನಡೆಯಬೇಕಾದ ಕಾರ್ಯ. ಪಟ್ಟಣದ ತುಂಗಾ ಸೇತುವೆ ಬಳಿ ಇರುವ ಅಲೆಮಾರಿ ಕುಟುಂಬಗಳ ಪುನರ್ವಸತಿಗೆ ನಿವೇಶವ ಗುರುತಿಸಲಾಗಿದೆ. ಅಲೆಮಾರಿಕೋಶದ ಅನುದಾನದಲ್ಲಿ ಈ ಕುಟುಂಬಗಳಿಗೆ ವಸತಿ ನಿರ್ವಿುಸಲಾಗುವುದು ಎಂದರು.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಧಿಕಾರಿಗಳೊಂದಿಗೆ ಬಂದಿಳಿದ ಜಿಲ್ಲಾಧಿಕಾರಿಯನ್ನು ಶಾಸಕ ಆರಗ ಜ್ಞಾನೇಂದ್ರ, ಪಪಂ ಅಧ್ಯಕ್ಷ ಸಂದೇಶ್ ಜವಳಿ ಸ್ವಾಗತಿಸಿದರು. ದೇವಸ್ಥಾನದ ಜೀಣೋದ್ಧಾರದ ಬಗ್ಗೆ ರಾಮೇಶ್ವರ ದೇವಸ್ಥಾನ ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಸದಸ್ಯರು ಮನವಿ ಸಲ್ಲಿಸಿದರು.