ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ಮಾಡಿದ ತೀರ್ಥಹಳ್ಳಿ ಶಾಸಕ

ತೀರ್ಥಹಳ್ಳಿ: ಮದುವೆಯೆಂದರೆ ಧಾರಾಳವಾಗಿ ಖರ್ಚು ಮಾಡಿ ಅದ್ಧೂರಿಯಾಗಿ ಮಾಡುವ ಸಮಾರಂಭ ಎನ್ನುವಂತಾಗಿದೆ. ಜನರು ತಮ್ಮ ಶಕ್ತ್ಯಾನುಸಾರ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಆದರೆ, ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ತಮ್ಮ ಪುತ್ರನ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಮಾಡಿಸುವ ಮೂಲಕ ಸರಳತೆ ಮೆರೆದಿದ್ದಾರೆ.

ಗುರುವಾರ ತೀರ್ಥಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅರಗ ಜ್ಞಾನೇಂದ್ರ ಪುತ್ರ ಅಭಿನಂದನ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹದಲ್ಲಿ 5 ಜೋಡಿಗಳು ಹೊಸ ಬಾಳಿಗೆ ಅಡಿಯಿಟ್ಟರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಸಿ.ಟಿ.ರವಿ, ಹರತಾಳು ಹಾಲಪ್ಪ, ವಿಶೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ. ಮಾಜಿ‌ ಶಾಸಕ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.