More

    ಮೂರನೇ ಸ್ಥಾನಕ್ಕೆ ಕುಸಿದ ವೆಂಕಟರಾವ, ಪೈಪೋಟಿ ನೀಡಿದ ಕೆ.ಕರಿಯಪ್ಪ

    ಸಿಂಧನೂರು: ಕ್ಷೇತ್ರದ ವಿಧಾನಸಭೆ ಚುನಾವಣೆ ಈ ಬಾರಿ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಕಾಂಗ್ರೆಸ್ ಹಂಪನಗೌಡ ಬಾದರ್ಲಿ ಜಯಗೊಳಿಸುವುದರೊಂದಿಗೆ ಮತದಾರನ ಕೃಪೆಗೆ ಪಾತ್ರರಾಗಿದ್ದಾರೆ. ಬಿಜೆಪಿ ಎರಡನೇ ಸ್ಥಾನ ಪಡೆದಿದರೆ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.

    ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದವರು ಮರು ಆಯ್ಕೆ ಕಷ್ಟ ಎನ್ನಲಾಗಿತ್ತು. ಆದರೆ ಹಂಪನಗೌಡ ಬಾದರ್ಲಿ 73183 ಮತ ಗಳಿಸಿ, 21991 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸುವ ಮೂಲಕ ಐದನೆ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.

    ಇದನ್ನೂ ಓದಿ: ಸಿಎಂ ಸ್ಥಾನ ಸಿಗದಿದ್ದರೆ ಸಚಿವ ಸ್ಥಾನವೂ ಬೇಡ: ಡಿಕೆಶಿ ಬಿಗಿ ಪಟ್ಟು, ಕಾಂಗ್ರೆಸ್​ ಹೈಕಮಾಂಡ್ ಕಂಗಾಲು

    ಶಾಸಕ ವೆಂಕಟರಾವ ನಾಡಗೌಡ ಕಳೆದ ಚುನಾವಣೆಯಲ್ಲಿ ಕೇವಲ 1,591 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಈ ಬಾರಿ 43,261 ಮತಗಳನ್ನು ಪಡೆದು ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನೂ ಚುನಾವಣೆ ಘೋಷಣೆಯಾದಾಗ ತಮಗೆ ಕಾಂಗ್ರೆಸ್‌ದಿಂದ ಟಿಕೆಟ್ ಸಿಗುವದಿಲ್ಲ ಎನ್ನುವುದನ್ನು ಅರಿತು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು 12 ದಿನದಲ್ಲಿಯೇ ಟಿಕೆಟ್ ಗಿಟ್ಟಿಸಿಕೊಂಡಿದ್ದ ಕೆ.ಕರಿಯಪ್ಪ 51,192 ಮತ ಪಡೆದು ಎರಡನೇ ಪಡೆಯಲು ಶಕ್ತರಾಗಿದ್ದಾರೆ.

    ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ವರುಣನ ಅಡ್ಡಿ ನಡುವೆಯೂ ಮೇ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಮತ ಸೆಳೆಯಲು ನಾನಾ ಕಸರತ್ತು ನಡೆಸಲಾಗಿತ್ತು. ಆದರೆ ಮೋದಿ ಅವರ ಪ್ರಚಾರ ಸಿಂಧನೂರಿನಲ್ಲಿ ವರ್ಕೌಟ್ ಆಗಿಲ್ಲ. ಆದರೆ ಬಿಜೆಪಿ ಮತಗಳಿಕೆಯಲ್ಲಿ ಯಶಸ್ಸಾಗಿದೆ. ಹಿಂದಿನ ಚುನಾವಣೆಯಲ್ಲಿ 15 ಸಾವಿರ ಮತಕ್ಕೆ ಮಾತ್ರ ಸೀಮಿತವಾಗಿತ್ತು. ಗೆಲ್ಲುವ ಅವಕಾಶವಿದ್ದರೂ, ಮತ್ತೇ ಬಿಜೆಪಿ ವಿಫಲತೆ ಸಾಧಿಸಿದೆ.

    ಹಂಪನಗೌಡ ಬಾದರ್ಲಿ ಅವರು ಇದು ಕೊನೇ ಚುನಾವಣೆ ಘೋಷಣೆ, ಅನುಕಂಪ, ವ್ಯಕ್ತಿತ್ವದ ಆಧಾರದಲ್ಲಿ ಗೆಲುವು ಸರಳವಾಗಿರಬಹುದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಗೊಂದಲ ಕಾಂಗ್ರೆಸ್‌ಗೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಫಲಿತಾಂಶದಿಂದ ತಿಳಿದು ಬರುತ್ತದೆ.

    ಮರುಕಳಿಸಿದ 2013 ಫಲಿತಾಂಶ

    2013 ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆ ಕಣದಲ್ಲಿ ಈ ಮೂವರು ಅಭ್ಯರ್ಥಿಗಳಿದ್ದರು. ಈಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಕರಿಯಪ್ಪ ಬಿಎಸ್‌ಆರ್ ಕಾಂಗ್ರೆಸ್‌ದಿಂದ ಸ್ಪರ್ಧಿಸಿ, 36 ಸಾವಿರ ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. 31 ಸಾವಿರ ಮತ ಪಡೆದ ಜೆಡಿಎಸ್‌ನ ವೆಂಕಟರಾವ ನಾಡಗೌಡ ಮೂರನೇ ಕುಸಿದಿದ್ದರು.

    69 ಸಾವಿರ ಮತ ಪಡೆದ ಹಂಪನಗೌಡ ಬಾದರ್ಲಿ 16 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಈಗ ಮತಗಳ ವ್ಯತ್ಯಾಸ ಬಿಟ್ಟರೆ, 2013 ರ ಫಲಿತಾಂಶವೇ ಮರುಕಳಿಸಿದೆ. ಇನ್ನೊಂದು ವಿಶೇಷ ಎಂದರೆ 2013 ರಂತೆ ಇಲ್ಲಿ ಗೆದ್ದ ಶಾಸಕ ಪಕ್ಷವೇ ಬಹುಮತ ಪಡೆದುಕೊಂಡಿದೆ.

    ಕಾಂಗ್ರೆಸ್ ಭರ್ಜರಿ ಗೆಲವು ಸಾಧಿಸುವ ಮೂಲಕ ತಾಲೂಕಿನಲ್ಲಿ ಸಂಚಲನ ಮೂಡಿಸಿದ್ದು, ಹಾಲಿ ಶಾಸಕ ವೆಂಕಟರಾವ ನಾಡಗೌಡ ಮೂರನೆ ಸ್ಥಾನಕ್ಕೆ ಕುಸಿದಿರುವುದು ಈಗ ಚರ್ಚಿತ ವಿಷಯವಾಗಿದೆ. ಬಿಜೆಪಿ ಅಭ್ಯರ್ಥಿಯು ಮತಗಳಿಕೆಯಲ್ಲಿ ಸಾಧನೆ ಮಾಡಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts