ಟಿಜಿ ಹಳ್ಳಿ ಜಲಾಶಯ ಅಭಿವೃದ್ಧಿಗೆ 286 ಕೋಟಿ ರೂ.

| ಅಭಯ್ ಮನಗೂಳಿ ಬೆಂಗಳೂರು

ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೆ ಸರ್ಕಾರ ಹಸಿರುನಿಶಾನೆ ತೋರಿದ ಬೆನ್ನಲ್ಲೇ ಜಲಮಂಡಳಿ ಸಿದ್ಧತೆ ಆರಂಭಿಸಿದ್ದು, 286 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಯೋಜನೆಗಳನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಿದೆ.

ಒಂದು ಕಾಲದಲ್ಲಿ ಬೆಂಗಳೂರಿಗೆ ನೀರಿನ ಮೂಲವಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ತೀವ್ರ ಕಲುಷಿತಗೊಂಡ ಹಿನ್ನೆಲೆಯಲ್ಲಿ ಕಳೆದೊಂದು ದಶಕದಿಂದ ಬಳಕೆಯಿಂದ ದೂರ ಉಳಿದಿತ್ತು. ಇದೀಗ ಜಲಾಶಯದ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರಿದೆ. 2019ರಲ್ಲಿ ಯೋಜನೆಯನ್ನು ಆರಂಭಿಸಲಿದೆ. ಮುಂದಿನ ವಾರದ ಹೊತ್ತಿಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈಗಾಗಲೇ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಕಲುಷಿತ ನೀರನ್ನು ಹೊರ ಹಾಕುವುದರೊಂದಿಗೆ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

2 ಹಂತದಲ್ಲಿ ಯೋಜನೆ: ಸರ್ಕಾರ ಕಾರ್ಯಗತಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆ ಮೂಲಕ ಬೆಂಗಳೂರಿಗೆ 2.5 ಟಿಎಂಸಿ ನೀರು ಲಭ್ಯವಾಗಲಿದೆ. ಈ ನೀರನ್ನು ತಿಪ್ಪಗೊಂಡನ ಹಳ್ಳಿ ಜಲಾಶಯ ಮತ್ತು ಹೆಸರುಘಟ್ಟ ಕೆರೆಯಲ್ಲಿ ಸಂಗ್ರಹಿಸಿ ಅಲ್ಲಿಂದ ಪೂರೈಸಲು ನಿರ್ಧರಿಸಲಾಗಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 1.7 ಟಿಎಂಸಿ ನೀರು ಮತ್ತು ಹೆಸರುಘಟ್ಟದಲ್ಲಿ 0.8 ಟಿಎಂಸಿ ನೀರನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನು 285.95 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. 2ನೇ ಹಂತದಲ್ಲಿ ಹೆಸರುಘಟ್ಟ ಕೆರೆಯನ್ನು 120.05 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. 2 ಹಂತಕ್ಕೆ ಒಟ್ಟು 406 ಕೋಟಿ ರೂ.ವೆಚ್ಚವಾಗಲಿದೆ.

ಕೆಯುಐಡಿಎಫ್​ಸಿಯಿಂದ ಯೋಜನೆಗೆ ಶೇ. 50 ಅನುದಾನದಲ್ಲಿ 143 ಕೋಟಿ ರೂ.ಗಳನ್ನು ಮೆಗಾ ಸಿಟಿ ಫಂಡ್​ನಲ್ಲಿ ಶೇ.6.5 ಬಡ್ಡಿಯೊಂದಿಗೆ ಸರ್ಕಾರ ಸಾಲ ಪಡೆಯಲಿದೆ. ಶೇ. 25 ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಶೇ. 25 ಮೊತ್ತವನ್ನು ಜಲಮಂಡಳಿಯ ಆದಾಯದ ಮೂಲಕ 143 ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ವ್ಯಯ ಮಾಡಲಾಗುತ್ತದೆ.

ಎಸ್​ಟಿಪಿ ಘಟಕಕ್ಕೆ 66 ಕೋಟಿ ರೂ.

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ತ್ಯಾಜ್ಯ ನೀರನ್ನು ತಡೆಗಟ್ಟಲು ಮೊದಲ ಹಂತದ ಕಾಮಗಾರಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್​ಟಿಪಿ) ನಿರ್ವಿುಸಲಾಗುತ್ತದೆ. 20 ದಶಲಕ್ಷ ಲೀಟರ್ ಸಂಸ್ಕರಣೆ ಸಾಮರ್ಥ್ಯದ ಈ ಘಟಕದ ನಿರ್ವಣಕ್ಕೆ 66 ಕೋಟಿ ರೂ. ವ್ಯಯ ಮಾಡುತ್ತಿದೆ. ಜಲಾಶಯದಲ್ಲಿ 30 ಅಡಿಗಿಂತ ಹೆಚ್ಚು ಹೂಳು ತುಂಬಿದ್ದು, ಹೊರಹಾಕಲು 22.7 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೊಂಡಲ್ಲಿ ಕುಡಿಯುವ ನೀರಿನ ಬಹುಪಾಲು ಸಮಸ್ಯೆಗೆ ಬ್ರೇಕ್ ಬೀಳುವ ಆಶಾಭಾವನೆಯಿದೆ. ಇದೇ ಕಾರಣಕ್ಕಾಗಿ ಜಲಮಂಡಳಿ ಹೆಚ್ಚಿನ ಆಸಕ್ತಿ ವಹಿಸಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ. ಜಲಮಂಡಳಿಯ ಸೇವೆ ದಿನದಿಂದ ದಿನದಕ್ಕೆ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರ ಬೇಡಿಕೆಯನ್ನು ತಣಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

22 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್​ಲೈನ್ ಅಳವಡಿಕೆ

ತಿಪ್ಪಗೊಂಡನಹಳ್ಳಿಯಿಂದ ತಾವರೆಕರೆ ಮೂಲಕ ಬೆಂಗಳೂರಿಗೆ ನೀರು ಪೂರೈಕೆ ಆರಂಭಗೊಳ್ಳಲಿದೆ. 2019ರಲ್ಲಿ ಯೋಜನೆ ಆರಂಭಗೊಂಡ ನಂತರ 30 ತಿಂಗಳು ಕಾಮಗಾರಿ ನಡೆಯಲಿದೆ. ಈ ಹಿಂದೆ ತಿಪ್ಪಗೊಂಡನಹಳ್ಳಿ ಡ್ಯಾಂ ನೀರು ಪೂರೈಸಲಾಗುತಿತ್ತು. ಆದರೆ ಕೈಗಾರಿಕೆ ತ್ಯಾಜ್ಯವನ್ನು ಯಥೇಚ್ಛವಾಗಿ ಹರಿಬಿಟ್ಟಿದ್ದರಿಂದ ಜಲಾಶಯ ಕಲುಷಿತಗೊಂಡು ಬಳಕೆಯಿಂದ ದೂರ ಉಳಿದಿತ್ತು. ಅಂದಿನ ಪೈಪ್​ಲೈನ್ ಮಾರ್ಗ ಈಗಲೂ ಇದ್ದು, ಅವುಗಳನ್ನು ಬದಲಿಸಲು ತೀರ್ವನಿಸಲಾಗಿದೆ. ಮೊದಲ ಹಂತದಲ್ಲಿ 65.8 ಕೋಟಿ ರೂ.ಗಳ ವೆಚ್ಚದಲ್ಲಿ 22 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ.

ಬೆಂಗಳೂರಲ್ಲಿ ಮೊದಲ ಬಾರಿ!

ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಸಿಲಿಕಾನ್​ಸಿಟಿಯಲ್ಲಿ ಮೊದಲ ಬಾರಿ ಎನ್ನಲಾಗಿರುವ ಒಜೋನೈಜೇಶನ್ ಮತ್ತು ಗ್ರಾನುಲರ್ ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರ್ಸ್ ಒಳಗೊಂಡಿರುವ ನೀರು ಶುದ್ಧೀಕರಣ ಘಟಕ ನಿರ್ವಿುಸಲು ಉದ್ದೇಶಿಸಲಾಗಿದೆ. ಈಗಾಗಲೇ ಹಳೆಯದಾಗಿರುವ ನೀರು ಶುದ್ಧೀಕರಣ ಘಟಕವು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿದೆ. ಅದನ್ನು ತೆರವುಗೊಳಿಸಿ ಹೊಸ ಘಟಕ ನಿರ್ವಿುಸಲು ಉದ್ದೇಶಿಸಲಾಗಿದೆ. ಹೊಸ ತಂತ್ರಜ್ಞಾನ ಬಳಕೆಯಿಂದ ನೀರು ಹೆಚ್ಚು ಶುದ್ಧೀಕರಣಗೊಳ್ಳಲಿದ್ದು, ಸಾರ್ವಜನಿಕರ ಪೂರೈಕೆಗೆ ಅನುಕೂಲವಾಗಲಿದೆ. ಈ ಘಟಕಕ್ಕಾಗಿ 115 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.

ಡ್ಯಾಂನಲ್ಲಿ ಏನೇನು ಕಾಮಗಾರಿ?

ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಎಸ್​ಟಿಪಿ, ಹೂಳೆತ್ತುವುದು, ಪೈಪ್​ಲೈನ್ ಅಳವಡಿಕೆ, ನೀರು ಶುದ್ಧೀಕರಣ ಘಟಕ, ನೀರೆತ್ತುವ ಯಂತ್ರಗಳ ದುರಸ್ತಿ, ಜಲಾಶಯ ದುರಸ್ತಿ, ಬೇಲಿ ಅಳವಡಿಕೆ ಸೇರಿ ಒಟ್ಟು 285.95 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುತ್ತದೆ.

ಹೆಸರುಘಟ್ಟದಲ್ಲಿ ಏನೇನು?

ಹೆಸರುಘಟ್ಟದಲ್ಲಿ 30 ಎಂಎಲ್​ಡಿ ನೀರು ಶುದ್ಧೀಕರಣ ಘಟಕಕ್ಕೆ 56.90 ಕೋಟಿ ರೂ., ಕೆರೆ ಪುನಶ್ಚೇತನಕ್ಕೆ 13 ಕೋಟಿ, ಹೊಸ ಕೊಳವೆಮಾರ್ಗ ನಿರ್ವಣಕ್ಕೆ 29.30 ಕೋಟಿ, ಹೆಸರಘಟ್ಟದಿಂದ ಟಿಜಿ ಹಳ್ಳಿ ಮಾರ್ಗದಲ್ಲಿ ಜಲಸಸ್ಯದಿಂದ ಕಲುಷಿತ ನೀರನ್ನು ಶುದ್ಧಿಕರಣಗೊಳಿಸಲು 16.50 ಕೋಟಿ, ಮತ್ತು ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ 4.35 ಕೋಟಿ ರೂ.ಗಳು ಸೇರಿ ಮುಂದಿನ ದಿನಗಳಲ್ಲಿ 120.05 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಟಿ.ಜಿ. ಹಳ್ಳಿ ಜಲಾಶಯ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿದ್ಧತೆ ಕೈಗೊಳ್ಳಲಾಗಿದೆ. ಶೀಘ್ರ ಟೆಂಡರ್ ಕರೆಯಲಾಗುತ್ತದೆ.

| ಎಸ್.ವಿ. ರಮೇಶ್ ಜಲಮಂಡಳಿ ಮುಖ್ಯ ಅಭಿಯಂತರ (ಕಾವೇರಿ ವಿಭಾಗ)