ಮೂಡಿಗೆರೆ: ಡೇರಿ ಸ್ಥಾಪನೆಯಿಂದ ಪಟ್ಟಣದ ಜನರಿಗೆ ಹಾಲು ದೊರೆಯುವುದಲ್ಲದೆ ರೈತರ ಹೈನುಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ಪೊಲೀಸ್ ಠಾಣೆ ಎದುರು ಮಲೆನಾಡು ಪ.ಜಾತಿ ವಿವಿಧೋದ್ದೇಶ ಸಹಕಾರ ಸಂಘದಿಂದ ಡೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಹೈನುಗಾರ ರೈತರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನದ ಹಾಲು ಮಾರಾಟಕ್ಕೆ ಕಷ್ಟವಾಗುತ್ತದೆ ಎಂದು ಕೆಲ ರೈತರು ಹೈನುಗಾರಿಕೆಯಿಂದ ಹಿಂದೆ ಸರಿದಿದ್ದಾರೆ. ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಡೇರಿ ಅಗತ್ಯವಿತ್ತು. ಅದನ್ನು ಸಂಸ್ಥೆ ಮಾಡಿದೆ. ಡೇರಿಯಿಂದ ಹಾಲು ಖರೀದಿ ಕೇಂದ್ರ ಸ್ಥಾಪನೆಗೂ ಚಿಂತನೆ ನಡೆದಿದೆ. ಹಾಲು ಖರೀದಿಯಲ್ಲಿ ತೊಡಗಿದ ನಂತರ ಗ್ರಾಮೀಣ ಭಾಗದಿಂದ ಹಾಲು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮಲೆನಾಡು ಪ.ಜಾತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹೈನುಗಾರಿಕೆ ನಡೆಸಿದರೆ ಹಾಲು ಖರೀದಿಗೆ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಡೇರಿ ಸ್ಥಾಪಿಸಿಲ್ಲವೆಂದು ರೈತರು ಕೊರಗುತ್ತಿದ್ದರು. ಈಗ ಡೇರಿ ಸ್ಥಾಪನೆಯಾಗಿದೆ. ರೈತರಿಂದ ಹಾಲು ಖರೀದಿ ಮಾಡಲು ಇರುವ ಅಡೆತಡೆಗಳನ್ನು ನಿವಾರಿಸಿ ಸದ್ಯದಲ್ಲಿ ಹಾಲು ಖರೀದಿ ಮತ್ತು ಮಾರಾಟ ಎಲ್ಲವನ್ನೂ ಮಾಡಲಾಗುವುದು ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ಗೀತಾ ಡೇರಿ, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಕೆ.ವೆಂಕಟೇಶ್, ಜೆ.ಬಿ.ಧರ್ಮಪಾಲ್, ರಂಜನ್ ಅಜಿತ್‌ಕುಮಾರ್, ಎಂ.ಕೆ.ಚಂದ್ರೇಶ್, ಪುಟ್ಟಸ್ವಾಮಿ ಗೌಡ, ಪಿ.ಕೆ.ನಾಗೇಶ್, ಯು.ಬಿ.ಮಂಜಯ್ಯ, ಬಿ.ಎಂ.ಶಂಕರ್, ಹೆಸಗಲ್ ಗಿರೀಶ್, ಪಿ.ಕೆ.ಹಮೀದ್, ಎಂ.ಎಸ್.ಕೃಷ್ಣ ಇತರರಿದ್ದರು.