More

  ಪಾಲಕರನ್ನು ಕಡೆಗಣಿಸುತ್ತಿರುವ ವಿದ್ಯಾವಂತರು: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾಧ

  ಮಂಡ್ಯ: ಪ್ರಸ್ತುತ ದಿನಗಳಲ್ಲಿ ವಿದ್ಯಾವಂತ ಸಮುದಾಯವೇ ತಮ್ಮ ಪಾಲಕರನ್ನು ಕಡೆಗಣಿಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾಧಿಸಿದರು.
  ನಗರದ ಸೇವಾಕಿರಣ ವೃದ್ಧಾಶ್ರಮದ ಸಭಾಂಗಣದಲ್ಲಿ ಸೇವಾಕಿರಣ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದ ಸಾಕಿ, ಲಾಲನೆ ಪಾಲನೆ ಮಾಡಿದ ವಯೋವೃದ್ಧ ಪಾಲಕರನ್ನು ವಿದ್ಯಾವಂತ ಮಕ್ಕಳು ಮನೆಯಿಂದ ಹೊರಹಾಕುವ ಪ್ರಕರಣಗಳನ್ನು ಕಂಡಿದ್ದೇವೆ. ಆಸ್ತಿ, ಹಣಕ್ಕಾಗಿ ಹಿರಿಯ ನಾಗರಿಕರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುವುದು ಹೆಚ್ಚಾಗುತ್ತಿದೆ ಎಂದು ನುಡಿದರು.
  ಹಿರಿಯ ನಾಗರಿಕರ ಹಿತ ಕಾಯಲು ಸಂವಿಧಾನದಡಿ ಸಾಕಷ್ಟು ಕಾನೂನುಗಳ ಹಕ್ಕುಗಳಿವೆ. ರಕ್ಷಣೆ ಮಾಡಿಕೊಳ್ಳಲು ಸೌಲಭ್ಯಗಳಿವೆ. ತೊಂದರೆ ನೀಡುವ ಮಕ್ಕಳು, ಸೊಸೆಯಂದಿರಿಗೆ ಶಿಕ್ಷೆಯಾದ ಪ್ರಕರಣಗಳು ಇವೆ. ಹಿರಿಯರನ್ನು ಗೌರವದಿಂದ ಕಾಪಾಡುವ ಜವಾಬ್ದಾರಿ ಪ್ರತಿ ಮಕ್ಕಳ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಮತ್ತು ಕಾಲೇಜು ನಡೆಸಬಹುದು. ಆದರೆ ಮಕ್ಕಳ ಮತ್ತು ವಯೋವೃದ್ಧರ ಆಶ್ರಮಗಳನ್ನು ನಡೆಸುವುದು ಕಷ್ಟಕರವಾಗಿದೆ. ಸೇವಾ ಮನೋಭಾವ ಇರುವ ಸ್ಥೈರ್ಯವಂತರಲ್ಲಿ ಮಾತ್ರ ಸಾಧ್ಯವಾಗುತ್ತದೆ. ವೃದ್ಧರ ಆರೋಗ್ಯ, ಔಷದೋಪಾಚಾರ, ಅವರಿಗೆ ತಕ್ಕ ಅಡುಗೆ ಒದಗಿಸುವುದು ಸಾಹಸ ಮಯವಾಗಿರುತ್ತದೆ ಎಂದು ತಿಳಿಸಿದರು.
  ಟ್ರಸ್ಟ್‌ನ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ಆಶ್ರಮ ಸ್ಥಾಪನೆ ಮಾಡಿ 20 ವರ್ಷವಾಗಿದೆ. ಉಚಿತವಾಗಿ ಆಶ್ರಮವಾಸಿಗಳಿಗೆ ಎಲ್ಲ ಸೌಲಭ್ಯ, ಸೌಕರ್ಯಗಳನ್ನು ನೀಡಲಾಗುತ್ತಿದೆ. 30 ಜನರು ಆಶ್ರಮದಲ್ಲಿ ಫಲಾನುಭವಿಗಳಾಗಿದ್ದಾರೆ. ಸಾಕಷ್ಟು ಹಣವಂತರು, ಆಸ್ತಿವಂತರೇ ತಮ್ಮ ಪಾಲಕರನ್ನು ಆಶ್ರಮಗಳಿಗೆ ಬಿಡುತ್ತಿದ್ದಾರೆ ಎಂದರು.
  ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಶಿವಾನಂದ ಮಾತನಾಡಿ, ನಮ್ಮ ಜಿಲ್ಲೆಗೆ ಅಪರೂಪದ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಡಾ.ಎಚ್.ಎಲ್.ನಾಗರಾಜು ಇದ್ದಾರೆ. ಇಂತಹ ಮಾನವತವಾದಿ ಅಧಿಕಾರಿಗಳು ಮತ್ತಷ್ಟು ಹೆಚ್ಚಾಗಬೇಕಿದೆ. ಜನರ ನೋವುಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವ ನಿಷ್ಠಾವಂತರ ಅಗತ್ಯವಿದೆ ಎಂದು ನುಡಿದರು.
  ರಾಮಕೃಷ್ಣ ವಿವೇಕಾನಂದ ಆಶ್ರಮದ ಗುರೂಜಿ ಮಂಜುನಾಥ್, ನಿವೃತ್ತ ಪಾಂಶುಪಾಲ ಜಿ.ವಿ.ಕುಮಾರ್, ಸೇವಾದಳದ ಸಂಘಟಕ ಗಣೇಶ್, ಆಶ್ರಮದ ಮೇಲ್ವಿಚಾರಕ ರಾಜಣ್ಣ, ದೇವರಾಜು, ನಾರಾಯಣಸ್ವಾಮಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts