ಬೆಂಗಳೂರು: ಈ ಹಿಂದೆ ಅರಣ್ಯ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಕಥೆ ಹೊಂದಿದ್ದ ‘ಹೊಂಬಣ್ಣ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು ರಕ್ಷಿತ್ ತೀರ್ಥಹಳ್ಳಿ. ಆ ನಂತರ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಯ ಕುರಿತಾದ ‘ಎಂಥಾ ಕಥೆ ಮಾರಾಯ’ ಎಂಬ ಚಿತ್ರ ಮಾಡಿದ್ದು, ಅದೀಗ ಬಿಡುಗಡೆಗೆ ಸಿದ್ಧವಿದೆ. ಈಗ ಮೂರನೇ ಚಿತ್ರವಾಗಿ ಅವರು ‘ತಿಮ್ಮನ ಮೊಟ್ಟೆಗಳು’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದು ಅವರದೇ ‘ಕಾಡಿನ ನೆಂಟರು’ ಎಂಬ ಕಥಾಸಂಕಲನದ ಒಂದು ಕಥೆ.
ಇದನ್ನೂ ಓದಿ: ನಟಿ ಸಮಂತಾ ಅಮೆರಿಕಕ್ಕೆ ತೆರಳಿರುವುದು ಚರ್ಮ ರೋಗದ ಚಿಕಿತ್ಸೆಗಾಗಿ ಅಲ್ಲ… ಇಲ್ಲಿದೆ ಅಸಲಿ ಕಾರಣ
ಇತ್ತೀಚೆಗೆ ಕಲಾವಿದರ ಸಂಘದ ಸಭಾಂಗಣದಲ್ಲಿ 4-ಇನ್-1 ಕಾರ್ಯಕ್ರಮ ನಡೆಯಿತು. ಶ್ರೀಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ ‘ಹೋಪ್’ ವೀಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ಅವರ ‘ಕಾಡಿನ ನೆಂಟರು; ಪುಸ್ತಕ ಬಿಡುಗಡೆ ಹಾಗೂ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಪೋಸ್ಟರ್ ಬಿಡುಗಡೆ ಒಂದೇ ವೇದಿಕೆಯಲ್ಲಿ ನಡೆಯಿತು. ಖ್ಯಾತ ಗೀತರಚನೆಕಾರ ಹಾಗೂ ನಿರ್ದೇಶಕ ಕವಿರಾಜ್, ಪ್ರವೀಣ್ ತೇಜ್, ಫ್ರೀಡಂ ಆಪ್ ನ ಸಿ.ಎಸ್.ಸುಧೀರ್, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿ ಆದರ್ಶ್ ಅಯ್ಯಂಗಾರ್ ಅವರ ಈ ನೂತನ ಪ್ರಯತ್ನಗಳಿಗೆ ಶುಭ ಕೋರಿದರು.
ಶಿವಮೊಗ್ಗ ಮೂಲದ ಆದರ್ಶ ಅಯ್ಯಂಗಾರ್ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಒಳ್ಳೆಯ ಗಾಯಕರೂ ಆಗಿರುವ ಆದರ್ಶ್ ಈಗಾಗಲೇ ಕೆಲವು ಆಲ್ಬಂ ವಿಡಿಯೋ ಸಾಂಗ್ಗಳನ್ನು ಹಾಡಿ ನಿರ್ಮಾಣ ಮಾಡಿದ್ದಾರೆ. ಈಗ ‘ಹೋಪ್’ ಹಾಡನ್ನು ಅವರು ಹೊರತಂದಿದ್ದಾರೆ.
ಈ ಕುರಿತು ಮಾತನಾಡುವ ಅವರು, ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್ ಜೋಯಿಸ್ ಜೊತೆಗೂಡಿ ಕೆಲವು ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿದ್ದೆವು. ಈ ಹಾಡುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಈಗ ನಾನು ಆರಂಭಿಸಿರುವ ಶ್ರೀಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಮೊದಲ ಚಿತ್ರವಾಗಿ ‘ತಿಮ್ಮನ ಮೊಟ್ಟೆಗಳು’ ಚಿತ್ರವನ್ನು ನಿರ್ಮಿಸುತ್ತಿದ್ದೇನೆ’ ಎಂದರು ಆದರ್ಶ್ ಅಯ್ಯಂಗಾರ್.
ಇದನ್ನೂ ಓದಿ: ‘ಕುಳ್ಳನ ಹೆಂಡತಿ’ ಟ್ರೈಲರ್ ಬಂತು; ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ
ಇನ್ನು, ‘ತಿಮ್ಮನ ಮೊಟ್ಟೆಗಳು’ ಕುರಿತು ಮಾತನಾಡುವ ರಕ್ಷಿತ್, ‘ನನ್ನ ಎಲ್ಲಾ ಚಿತ್ರಗಳಲ್ಲೂ ಪಶ್ಚಿಮ ಘಟ್ಟದ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತೆ. ಇಲ್ಲಿಯೂ ಸಹ ಹೊಸ ವಿಷಯವನ್ನು ಹೇಳ ಹೊರಟಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ’ ಎಂದರು.
ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…