ಹೈದರಾಬಾದ್: ರೈಲು ಎಷ್ಟೊತ್ತಿಗೆ ನಿಲ್ದಾಣಕ್ಕೆ ಬರುತ್ತದೆ ಎಂಬ ಮಾಹಿತಿ ಸುಲಭವಾಗಿ ಸಿಗಲೆಂದು ಭಾರತೀಯ ರೈಲ್ವೆ ಸಿದ್ಧಪಡಿಸಿರುವ “ಟ್ರೇನ್ ಟ್ರ್ಯಾಕಿಂಗ್ ಆ್ಯಪ್” ಅನ್ನು ಕುಖ್ಯಾತ ದರೋಡೆಕೋರರ ಗುಂಪೊಂದು ದುಷ್ಕೃತ್ಯ ಎಸಗಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿತ್ತು ಎಂಬ ಆತಂಕಕಾರಿ ವಿಚಾರ ಇದೀಗ ಬಹಿರಂಗವಾಗಿದೆ.
“ವೇರ್ ಈಸ್ ಮೈ ಟ್ರೇನ್” ಎಂಬ ಆ್ಯಪ್ ಬಳಸಿಕೊಂಡು ತಮ್ಮ ಹತ್ತಿರದಲ್ಲೇ ಇರುವ ರೈಲಿನ ಸ್ಥಳದ ಬಗ್ಗೆ ದರೋಡೆಕೋರರ ತಂಡ ಮಾಹಿತಿ ಪಡೆದುಕೊಳ್ಳುತ್ತಿತ್ತು. ಬಳಿಕ ಮಾರ್ಗ ಮಧ್ಯೆದಲ್ಲೇ ಅನಧಿಕೃತವಾಗಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತಿತ್ತು. ‘ರೈಲು ನಿಲ್ಲಿಸುತ್ತಿದ್ದಂತೇ ರೈಲಿನೊಳಗೆ ನುಗ್ಗಿ ಪ್ರಯಾಣಿಕರನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿತ್ತು ಎನ್ನಲಾಗಿದೆ.
ಲೂಟಿ ಮಾಡಿ ಪರಾರಿಯಾಗಲು ಸುಲಭವಾಗಲೆಂದು ದರೋಡೆಕೋರರು ಹೆದ್ದಾರಿಯ ಸಮೀಪವೇ ಕೃತ್ಯವನ್ನು ಎಸಗುತ್ತಿದ್ದರು. ದೂರ ಪ್ರಯಾಣದ ರೈಲುಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು ಎಂಬುದು ಸ್ಪಷ್ಟವಾಗಿದೆ.
ಸದ್ಯ ದರೋಡೆಕೋರರ ಗುಂಪಿನ ಒಬ್ಬ ಸದಸ್ಯನನ್ನು ಸಿಕಂದರಾಬಾದ್ ವಿಭಾಗದ ರೇಲ್ವೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಾಲಾಜಿ ಶ್ರಿರಂಗ್ ಶಿಂಧೆ ಬಂಧಿತ. ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಆ ವೇಳೆ ಇಬ್ಬರು ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.
ಸಂತ್ರಸ್ತರೊಬ್ಬರು ನೀಡಿದ ಸುಳಿವಿನಿಂದ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಗುಂಪಿನ ಸದಸ್ಯರೆಲ್ಲ ಮಹಾರಾಷ್ಟ್ರ ಮೂಲದವರೆಂದು ಗೊತ್ತಾಗಿದೆ. ಅಪರಾಧವೆಸಗಲು ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)