ದರ್ಶನ್ ಚಿತ್ರವಿದ್ದ ಆಟೋ ಚಕ್ರಗಳನ್ನು ಕದ್ದೊಯ್ದ ಕಳ್ಳರು!

ಕೆ.ಆರ್.ಪೇಟೆ: ದರ್ಶನ್ ಅಭಿಮಾನಿ ಆಟೋ ಚಾಲಕರೊಬ್ಬರು ಡಿ ಬಾಸ್ ಎಂದು ತಮ್ಮ ಆಟೋ ಹಿಂಭಾಗದಲ್ಲಿ ಬರೆಸಿದ್ದಕ್ಕೆ ಕಿಡಿಗೇಡಿಗಳು ಎರಡು ಚಕ್ರಗಳನ್ನು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ.

ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಸಂತೋಷ್ ಎಂಬ ಆಟೋ ಚಾಲಕ ದರ್ಶನ್ ಅಭಿಮಾನಿಯಾಗಿದ್ದು, ತನ್ನ ಆಟೋದ ಹಿಂಭಾಗದಲ್ಲಿ ದರ್ಶನ್ ಚಿತ್ರ ಬಿಡಿಸಿ ಡಿ ಬಾಸ್ ಎಂದು ಬರೆಸಿಕೊಂಡಿದ್ದರು. ದರ್ಶನ್ ಫೋಟೋ ಹಾಕಿಕೊಂಡಿರುವುದನ್ನು ಸಹಿಸದ ಕಿಡಿಗೇಡಿಗಳು ಮನೆ ಮುಂಭಾಗ ನಿಲ್ಲಿಸಿದ್ದ ಆಟೋ ಹಿಂಭಾಗದ ಎರಡು ಚಕ್ರಗಳನ್ನು ಸೋಮವಾರ ರಾತ್ರಿ ಬಿಚ್ಚಿ ಕದ್ದೊಯ್ದಿದ್ದಾರೆ.

ಬೆಳಗ್ಗೆ ಆಟೋ ಸ್ವಚ್ಛ ಮಾಡಲು ಬಂದಾಗ ಚಕ್ರಗಳು ಇಲ್ಲದಿರುವುದು ಗೊತ್ತಾಯಿತು. ಸುಮಲತಾ ಅಂಬರೀಷ್ ಪರ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾರೆ. ಆ ಸಿಟ್ಟಿಗೆ ಹಾಗೂ ರಾಜಕೀಯ ದುರುದ್ದೇಶದಿಂದ ಆಟೋದ ಚಕ್ರಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.

ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲು ಸಂತೋಷ್ ತೆರಳಿದ್ದಾಗ ಸ್ವೀಕರಿಸಲು ಪೊಲೀಸರು ಒಪ್ಪಿರಲಿಲ್ಲ. ವಿಷಯ ತಿಳಿದ ಐವತ್ತಕ್ಕೂ ಹೆಚ್ಚು ಆಟೋ ಚಾಲಕರು ಠಾಣೆ ಎದುರು ಜಮಾವಣೆಗೊಂಡರು. ಪ್ರತಿಭಟನೆ ನಡೆಸುವ ಸೂಚನೆ ತಿಳಿದು ಪೊಲೀಸರು ದೂರನ್ನು ಸ್ವೀಕರಿಸಿದರು. ಆರೋಪಿಗಳನ್ನು ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ಚಾಲಕರು ಒತ್ತಾಯಿಸಿದ್ದಾರೆ.