ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ರಾಣೆಬೆನ್ನೂರ: ಎಟಿಎಂ ಒಡೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಗರದ ಮೇಡ್ಲೇರಿ ರಸ್ತೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಇಲ್ಲಿನ ಕೆನರಾ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು ಗ್ಲಾಸ್ ಒಡೆದು, ಯಂತ್ರವನ್ನು ಹೊತ್ತೊಯ್ಯವ ಯತ್ನ ನಡೆಸಿದ್ದಾರೆ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಯಂತ್ರವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಎಎಸ್​ಪಿ ಜಿ.ಎ. ಜಗದೀಶ, ಡಿವೈಎಸ್​ಪಿ ಅನೀಲ ಕುಮಾರ ಭೂಮರಡ್ಡಿ ಹಾಗೂ ನಗರ ಠಾಣೆ ಪಿಎಸ್​ಐ ಟಿ. ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಟಿಎಂ ಯಂತ್ರ ಹಾಗೂ ಕೇಂದ್ರದ ಒಳಗೆ ಬೆರಳಚ್ಚು ತಜ್ಞರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರತಾ ಸಿಬ್ಬಂದಿ ಇರಲಿಲ್ಲ: ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದನ್ನು ಅರಿತ ಕಳ್ಳರು ಹೊಂಚು ಹಾಕಿ ಗುರುವಾರ ಬೆಳಗಿನ ಜಾವ 3.15ರ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕೇಂದ್ರದಲ್ಲಿನ ಸಿಸಿ ಕ್ಯಾಮರಾವನ್ನು ಜಖಂ ಗೊಳಿಸಿದ್ದಾರೆ. ನಗರದ ಎಲ್ಲ ಎಟಿಎಂ ಕೇಂದ್ರಗಳಲ್ಲೂ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಈಗಾಗಲೇ ಪೊಲೀಸ್ ಇಲಾಖೆ ಸೂಚನೆ ನೀಡಿದ್ದಾರೆ. ಆದರೆ, ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.