ಮಾಂಗಲ್ಯ ಸರ ಕಳ್ಳನ ಬಂಧನ

ರಾಣೆಬೆನ್ನೂರ: ಮಾಂಗಲ್ಯ ಸರ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ ಅಂದಾಜು 1 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊನ್ನಾಳಿ ತಾಲೂಕಿನ ಯಕನಹಳ್ಳಿ ಗ್ರಾಮದ ಸಚಿನ ಸುರೇಶ ರಾಯ್ಕರ ಬಂಧಿತ ಆರೋಪಿ. ಈತ ನಗರದ ಕೆಂಬ್ರಿಡ್ಜ್ ಶಾಲೆಯ ಹತ್ತಿರದಲ್ಲಿ ನ. 29ರಂದು ತಾಲೂಕಿನ ಮೈದೂರ ಗ್ರಾಮದ ಕುಮದಾ ವೆಂಕಪ್ಪ ಸಾವುಕಾರ ಎಂಬುವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ನಗರದ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಆರೋಪಿ ಸಚಿನನನ್ನು ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ಬಯಲಾಗಿದೆ. ಬಂಧಿತನಿಂದ 1 ಲಕ್ಷ ರೂ. ಮೌಲ್ಯದ 37 ಗ್ರಾಂ. ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಳಿಯಲ್ಲಿ ಸಿಪಿಐ ಲಿಂಗನಗೌಡ ನೆಗಳೂರ, ಪಿಎಸ್​ಐ ಟಿ. ಮಂಜಣ್ಣ, ಎಸ್​ಎಸ್​ಐ ಕೆ.ಸಿ. ಕೋಮಲಾಚಾರ್, ರಾಜಣ್ಣ ವಡ್ಡರ, ಕೆ.ಪಿ. ಅರಳಿಮರದ, ವಸಂತ ನಾಯಕ, ಪಿ.ಕೆ. ಸನದಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.