ಮೂವರು ಮರಗಳ್ಳರ ಬಂಧನ

ಬೆಳ್ತಂಗಡಿ: ಕುಖ್ಯಾತ ಮರ ಕಳ್ಳರ ತಂಡವೊಂದರ ಮೂವರು ಆರೋಪಿಗಳನ್ನು ಬಂಧಿಸಿರುವ ಬೆಳ್ತಂಗಡಿ ಅರಣ್ಯ ಇಲಾಖೆ, ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ಮರ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.

ಕೋಟೆಕಾರು ನಿವಾಸಿ ಅಬ್ಬಾಸ್(46), ಕಕ್ಕಿಂಜೆ ಗಾಂಧಿನಗರ ನಿವಾಸಿ ಮಹಮ್ಮದ್ ಸೂಫಿ (34) ಹಾಗೂ ಗುಂಡ್ಯ ನಿವಾಸಿ ಸುರೇಶ(36) ಬಂಧಿತ ಆರೋಪಿಗಳು. ಕೌಕ್ರಾಡಿ ಹೊಸಮಜಲು ನಿವಾಸಿ ಮಹಮ್ಮದ್ ಬಾವ ಎಂಬಾತ ದಾಳಿಯ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಆರೋಪಿಗಳು ಅರಣ್ಯದಿಂದ ಬೀಟೆ ಹಾಗೂ ಸಾಗುವಾನಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು, ಶನಿವಾರ ಬೆಳಗ್ಗಿನ ಜಾವ ಧರ್ಮಸ್ಥಳ ಸಮೀಪ ಪುದುವೆಟ್ಟು ಕ್ರಾಸ್‌ನಲ್ಲಿ ಕಾದು ಕುಳಿತು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಟಾಟಾ ಸಿಯಾರೋ ಕಾರಿನಲ್ಲಿ ಮರ ಸಾಗಾಟ ಮಾಡುತ್ತಿದ್ದರು. 5 ಸಾಗುವಾನಿ ಮರದ ತುಂಡುಗಳು, 5 ಬೀಟೆ ಮರದ ತುಂಡುಗಳು, ಎರಡು ಗರಗಸ, ಕತ್ತಿ, ಹಗ್ಗ ಹಾಗೂ ಕಾರು ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಡಿಸಿಎಫ್ ಡಾ.ಕರಿಕಲನ್ ಹಾಗೂ ಎಸಿಎಫ್ ಶಂಕರೇಗೌಡ ಮಾರ್ಗದರ್ಶನದಲ್ಲಿ ವಲಯರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ನೇತೃತ್ವದಲ್ಲಿ ಉಪ ವಲಯರಣ್ಯಾಧಿಕಾರಿಗಳಾದ ಯತೀಂದ್ರ, ರವೀಂದ್ರ, ಹರಿಪ್ರಸಾದ್, ಉಲ್ಲಾಸ್ ಕೆ, ರಾಘವೇಂದ್ರ, ಅರಣ್ಯ ರಕ್ಷಕರಾದ ರಾಘವೇಂದ್ರ ಪ್ರಸಾದ್, ಶರತ್ ಶೆಟ್ಟಿ, ರಾಜೇಶ್ ಗಾಡಿಗ, ಪಾಂಡುರಂಗ ಹಾಗೂ ಇತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಕುಖ್ಯಾತ ಮರಗಳ್ಳರು: ಆರೋಪಿಗಳಲ್ಲಿ ಒಬ್ಬನಾಗಿರುವ ಅಬ್ಬಾಸ್ ಕುಖ್ಯಾತ ಮರಗಳ್ಳನಾಗಿದ್ದು, ವರ್ಷದ ಹಿಂದೆಯೂ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಇದು ಕುಖ್ಯಾತ ಅರಣ್ಯ ಚೋರರ ತಂಡವಾಗಿದ್ದು, ಈಗಾಗಲೇ ಇಲಾಖೆಯಲ್ಲಿ ಹಲವು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಈ ಬಗ್ಗೆಯೂ ವಿಚಾರಣೆ ಮುಂದುವರಿದಿದೆ.

Leave a Reply

Your email address will not be published. Required fields are marked *