ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ನವದೆಹಲಿ: 2004ರಿಂದ 2014ರವರೆಗಿನ ಕಾಂಗ್ರೆಸ್​ ಆಡಳಿತದಲ್ಲಿ ಒಟ್ಟು ಆರು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂದು ಕಾಂಗ್ರೆಸ್​ ಇತ್ತೀಚೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿತ್ತು. ನಂತರ ಜಮ್ಮು ಮೂಲದ ಕಾರ್ಯಕರ್ತ ರೋಹಿತ್​ ಚೌಧರಿ ಎಂಬುವರು ದಾಳಿ ನಡೆದ ಬಗ್ಗೆ ಮಾಹಿತಿ ನೀಡುವಂತೆ ಆರ್​ಟಿಐ ಕಾಯ್ದೆಯಡಿ ಮಾಹಿತಿ ಕೇಳಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವಾಲಯ, ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ಗಳು ನಡೆದ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಮಾಹಿತಿ ನೀಡಿದೆ.

ಅರ್ಜಿಗೆ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕರು ಉತ್ತರ ನೀಡಿದ್ದು, 2016ರ ಸೆಪ್ಟೆಂಬರ್​ 29ರಂದು ನಮ್ಮ ಸೈನ್ಯ ಗಡಿ ನಿಯಂತ್ರಣಾ ರೇಖೆಯ ಬಳಿ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದರ ಬಗ್ಗೆ ನಮ್ಮಲ್ಲಿ ದತ್ತಾಂಶಗಳಿವೆ. ಇದಕ್ಕೂ ಮೊದಲು ನಡೆದ ಸರ್ಜಿಕಲ್​ ಸ್ಟ್ರೈಕ್​ಗಳ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.
ಕಳೆದವರ್ಷದಿಂದಲೂ ಕಾಂಗ್ರೆಸ್​ ತಾವೂ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದಾಗಿ ಹೇಳುತ್ತ ಬಂದಿದೆ. ಇತ್ತೀಚೆಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕೂಡ ತಮ್ಮ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂದಿದ್ದರು. ಅಲ್ಲದೆ ಕಾಂಗ್ರೆಸ್​ ಹಿರಿಯ ಮುಖಂಡ ರಾಜೀವ್ ಶುಕ್ಲಾ, ಯಾವ್ಯಾವ ಸ್ಥಳದಲ್ಲಿ ಯಾವ್ಯಾವಾಗ ದಾಳಿ ನಡೆಸಲಾಗಿತ್ತು ಎಂಬ ಪಟ್ಟಿಯನ್ನೂ ಕೊಟ್ಟಿದ್ದರು.

ಅಲ್ಲದೆ 2011ರಲ್ಲಿ ಆಪರೇಷನ್​ ಜಿಂಜರ್​ ಹೆಸರಿನಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂದು ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​ ಕೂಡ ಕೆಲವು ದಿನಗಳ ಹಿಂದೆ ಹೇಳಿದ್ದರು. ಹಾಗೇ, ಇದೆಲ್ಲ ಸಂಭ್ರಮಿಸುವ ವಿಷಯವಲ್ಲ. ಗೌಪ್ಯವಾಗಿಡಬೇಕು. ಮನಮೋಹನ್​ ಸಿಂಗ್​ ಗುಟ್ಟಾಗಿಟ್ಟಿದ್ದರು. ಆದರೆ ಮೋದಿ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದ್ದರು.

ಆದರೆ ಕಾಂಗ್ರೆಸ್​ ಅವಧಿಯಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದಿದ್ದು ವಿಡಿಯೋ ಗೇಮ್​ ಹಾಗೂ ಕಾಗದದ ಮೇಲೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವ್ಯಂಗ್ಯವಾಡಿದ್ದರು.

Leave a Reply

Your email address will not be published. Required fields are marked *