ಥೆರೆಸಾ ಮೇಗೆ ಮುಖಭಂಗ

ಲಂಡನ್: ಬ್ರೆಕ್ಸಿಟ್ ಕರಡು ಒಪ್ಪಂದಕ್ಕೆ ಬ್ರಿಟನ್ ಸಂಸತ್ತು ಅನುಮತಿ ನೀಡಲು ನಿರಾಕರಿಸಿದ್ದು, ಪ್ರಧಾನಿ ಥೆರೆಸಾ ಮೇಗೆ ಭಾರಿ ಮುಖಭಂಗವಾಗಿದೆ.

ಬ್ರೆಕ್ಸಿಟ್ ಕುರಿತು ಬ್ರಿಟನ್ ಸಂಸತ್​ನಲ್ಲಿ ಮಂಗಳವಾರ ನಡೆದ ಮತದಾನದಲ್ಲಿ 432-202 ಅಂತರದಲ್ಲಿ ಪ್ರಧಾನಿಗೆ ಸೋಲಾಗಿದೆ. ಪ್ರಸ್ತುತ ಒಪ್ಪಂದಕ್ಕೆ ಆಡಳಿತ ಪಕ್ಷ ಕನ್ಸರ್ವೆಟಿವ್​ನ 118 ಸಂಸದರು ಸೇರಿ ಒಟ್ಟು 432 ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮತದಾನದಲ್ಲಿ ಮೇ ಸೋಲುತ್ತಿದ್ದಂತೆ ಪ್ರತಿಪಕ್ಷ ಲೇಬರ್ ಪಾರ್ಟಿಯ ಅಧ್ಯಕ್ಷ ಜೆರೆಮಿ ಕಾರ್ಬಿನ್ ಪ್ರಧಾನಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ.

28 ಸದಸ್ಯ ದೇಶಗಳ ಐರೋಪ್ಯ ಒಕ್ಕೂಟಕ್ಕೆ 1973ರಲ್ಲಿ ಸೇರಿದ್ದ ಬ್ರಿಟನ್, 2016ರಲ್ಲಿ ಹೊರಹೋಗಲು ನಿರ್ಣಯ ಮಾಡಿತ್ತು. ಆ ಪ್ರಕಾರ ಮುಂಬರುವ ಮಾ. 29ರ ರಾತ್ರಿ 11 ಗಂಟೆ ಬಳಿಕ ಒಕ್ಕೂಟದಿಂದ ಬ್ರಿಟನ್ ಹೊರಹೋಗಬೇಕಿದೆ. ಆದರೆ ಈ ಸೋಲಿನಿಂದ ಬ್ರಿಟನ್​ನಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಯಾಗಿದೆ.

ಡೆಡ್​ಲೈನ್ ಮುಂದೂಡಿಕೆ?: ಬ್ರೆಕ್ಸಿಟ್​ಗೆ ಮಾ. 29ರ ಮಧ್ಯರಾತ್ರಿ 11 ಗಂಟೆಯ ಗಡುವು ನಿಗದಿಪಡಿಸಲಾಗಿದೆ. 2016ರಲ್ಲಿ ಬ್ರಿಟನ್ ಸರ್ಕಾರ ಮಾಡಿರುವ ಕಾಯ್ದೆ ಪ್ರಕಾರ ಇಷ್ಟರೊಳಗೆ ಬ್ರೆಕ್ಸಿಟ್ ಒಪ್ಪಂದಕ್ಕೆ ಹಸಿರು ನಿಶಾನೆ ಸಿಗಬೇಕಿದೆ. ಆದರೆ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಈ ಗಡುವು ವಿಸ್ತರಿಸಲು ಥೆರೆಸಾ ಮೇ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಲ್ಲವಾದಲ್ಲಿ ಯಾವುದೇ ಒಪ್ಪಂದವಿಲ್ಲದೇ ಬ್ರೆಕ್ಸಿಟ್​ಗೆ ಅನುಮತಿ ನೀಡಬೇಕಾಗುತ್ತದೆ. ಇದರಿಂದ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಬ್ರಿಟನ್ ನಾಗರಿಕರ ಸಂಚಾರ, ಆರ್ಥಿಕ-ವಾಣಿಜ್ಯ ವ್ಯವಹಾರಗಳಿಗೆ ಸಮಸ್ಯೆ ಆಗಲಿದೆ.

ಮೇ ಗೆಲುವು ಸಾಧ್ಯತೆ

ಬ್ರೆಕ್ಸಿಟ್ ಮತದಾನದಲ್ಲಿ ಥೆರೆಸಾ ಮೇ ಸೋಲು ಅನುಭವಿಸಿದ್ದರೂ ಪ್ರತಿಪಕ್ಷಗಳ ಅವಿಶ್ವಾಸ ಮತಯಾಚನೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಆಡಳಿತಾರೂಢ ಕನ್ಸರ್ವೆಟಿವ್ ಪಕ್ಷ ಚುನಾವಣೆಗೆ ತಯಾರಿಲ್ಲ. ಹೀಗಾಗಿ ಅವಿಶ್ವಾಸ ಮತಯಾಚನೆಯಲ್ಲಿ ಸೋಲು ಅನುಭವಿಸಿದರೆ ಮಧ್ಯಂತರ ಚುನಾವಣೆ ಅನಿವಾರ್ಯವಾಗಲಿದೆ ಎಂಬ ಆತಂಕವಿದೆ. ಏಕೆಂದರೆ ಮೇ ಹೊರತಾಗಿ ಕನ್ಸರ್ವೆಟಿವ್ ಪಕ್ಷದ ಇತರ ನಾಯಕರ ಮೇಲೆ ಅಷ್ಟೊಂದು ವಿಶ್ವಾಸ ಉಳಿದಿಲ್ಲ. ಇನ್ನು ಕೆಲ ಸಣ್ಣಪುಟ್ಟ ಪಕ್ಷಗಳು ಕೂಡ ಮೇ ಸರ್ಕಾರದ ಪರ ಮತಯಾಚಿಸುವುದಾಗಿ ಹೇಳಿವೆ. ಆದಾಗ್ಯೂ ಲಂಡನ್ ಕಾಲಾವಧಿ ಪ್ರಕಾರ ಸಂಜೆ 7 ಗಂಟೆಗೆ ನಡೆಯುವ ಮತದಾನದಲ್ಲಿ ಮೇ ಭವಿಷ್ಯ ನಿರ್ಧಾರವಾಗಲಿದೆ.

ಬ್ರೆಕ್ಸಿಟ್ ಮತ ವಿವರ

ಪರ: 202
ಕನ್ಸರ್ವೆಟಿವ್: 196
ಲೇಬರ್: 3

ಇತರೆ: 3

ವಿರೋಧ: 432 ?ಕನ್ಸರ್ವೆಟಿವ್-118 ?ಲೇಬರ್: 250 ?ಸ್ಕಾಟಿಶ್ ನ್ಯಾಷನಲ್ ಪಾರ್ಟಿ: 35 ?ಲಿಬರಲ್ ಡೆಮಕ್ರಾಟ್: 11 ?ಡೆಮಕ್ರಾಟಿಕ್ ಯೂನಿಯನಿಸ್ಟ್ ಪಾರ್ಟಿ: 8 ?ಗ್ರೀನ್ ಪಾರ್ಟಿ: 1 ?ಪ್ಲೈಡ್ ಕೈಮ್ರು: 4 ?ಪಕ್ಷೇತರರು: 5

ಪ್ರಧಾನಿ ರೇಸ್​ನಲ್ಲಿ ಯಾರ್ಯಾರು?

ಡೊಮಿನಕ್ ರಾಬ್, ಸಾಜಿದ್ ಜಾವೀದ್, ಬೊರಿಸ್ ಜಾನ್ಸನ್, ಮೈಕಲ್ ಕೋವ್, ಜೆರ್ವಿು ಹಂಟ್, ಜಾಕಬ್ ರೀಸ್ ಮಾಗ್, ಡೇವಿಡ್ ಡೇವಿಸ್.

ಅವಿಶ್ವಾಸ ಗೊತ್ತುವಳಿ ಸರ್ಕಾರ ಗೆದ್ದರೆ?

# ಬ್ರೆಕ್ಸಿಟ್ ಒಪ್ಪಂದಕ್ಕೆ ಹೊಸ ಅವಕಾಶ ಹುಡುಕುವುದು.

# ಆಡಳಿತ, ಪ್ರತಿಪಕ್ಷಗಳ ಸಂಸದರ ಜತೆ ಪರಿಹಾರ ಮಾರ್ಗದ ಬಗ್ಗೆ ಚರ್ಚೆ

ಪ್ರತಿಪಕ್ಷ ಗೆದ್ದರೆ?

# 14 ದಿನಗಳೊಳಗೆ ಹೊಸ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಪ್ರಯತ್ನ

# ನೂತನ ಸರ್ಕಾರ ಕೂಡ ವಿಶ್ವಾಸ ಮತಯಾಚನೆ ಮಾಡಬೇಕು.

# ಅಸಾಧ್ಯವಾದರೆ 25 ದಿನ ಗಳೊಳಗೆ ಚುನಾವಣೆಗೆ ತಯಾರಿ

ಮುಂದೇನು?

1. ಬ್ರೆಕ್ಸಿಟ್​ನಿಂದ ಹೊರಬಂದು ಒಕ್ಕೂಟದಲ್ಲಿ ಉಳಿಯುವ ನಿರ್ಧಾರ. 2. ಯಾವುದೇ ಒಪ್ಪಂದವಿಲ್ಲದೇ ಬ್ರೆಕ್ಸಿಟ್ ಅನುಷ್ಠಾನ. 3. ಎಲ್ಲ ಪಕ್ಷಗಳಿಗೆ ಸಮ್ಮತಿ ಆಗುವ ರೀತಿಯಲ್ಲಿ ನೂತನ ಒಪ್ಪಂದ ಕರಡು ತಯಾರಿಸುವುದು.