ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಧಾನ ಮಂತ್ರಿ ಥೆರೇಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾಗಿದೆ.
ಸಂಸತ್ನಲ್ಲಿ ಬ್ರೆಕ್ಸಿಟ್ ಒಪ್ಪಂದದ ಕುರಿತಾದ ವಿಧೇಯಕವನ್ನು ಮಂಗಳವಾರ ಮತಕ್ಕೆ ಹಾಕಲಾಗಿತ್ತು. ಮತ ಪ್ರಕ್ರಿಯೆಯಲ್ಲಿ ಒಪ್ಪಂದ ಪರ 202 ಸಂಸದರ ಮತ ಚಲಾಯಿಸಿದರೆ ವಿರುದ್ಧವಾಗಿ 432 ಮತಗಳು ಚಲಾವಣೆಯಾಗಿವೆ. ಈ ಮೂಲಕ ವಿಧೇಯಕ ಸರ್ವಾನುಮತದಿಂದ ತಿರಸ್ಕೃತವಾಗಿದೆ.
ವಿಧೇಯಕಕ್ಕೆ ಸೋಲಾಗುತ್ತಿದ್ದಂತೆ ಥೇರೇಸಾ ಮೇ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ತಿಳಿಸಿದ್ದಾರೆ.
ಬ್ರಿಟನ್ ಪಾರ್ಲಿಮೆಂಟ್ನಲ್ಲಿ ಡಿ. 12ಕ್ಕೆ ಬ್ರೆಕ್ಸಿಟ್ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ, ನಿಯಮಾವಳಿ ಬಗ್ಗೆ ಭಿನ್ನಮತೀಯ ಸಂಸದರ ಮನವೊಲಿಸಲು ಸಮಯಾವಕಾಶ ಬೇಕಿದ್ದ ಕಾರಣ ಥೇರೆಸಾ ಮೇ ಈ ಪ್ರಕ್ರಿಯೆಯನ್ನು ಮುಂದೂಡಿದ್ದರು.
ಏನಿದು ಬ್ರೆಕ್ಸಿಟ್?
28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಬ್ರಿಟನ್ನಲ್ಲಿ ಕೇಳಿಬಂದಿತ್ತು. ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು.
BrexitEuropean UnionTheresa Mayಐರೋಪ್ಯ ಒಕ್ಕೂಟಥೆರೇಸಾ ಮೇಬ್ರೆಕ್ಸಿಟ್