More

  ಸುರಂಗ ಕುಸಿದಿರುವುದು ಹೊರಗಿನವರಿಗೆ ಗೊತ್ತಾಗಿದ್ಹೇಗೆ? ಒಳಗಿದೆ ಇನ್ನೂ 25 ದಿನಕ್ಕಾಗುವಷ್ಟು ಆಹಾರ!

  ಡೆಹ್ರಾಡೂನ್​: ಉತ್ತರಾಖಂಡದ ಸಿಲ್ಕ್​ಯಾರ ಸುರಂಗದಲ್ಲಿ ಸಿಲುಕ್ಕಿದ್ದ 41 ಕಾರ್ಮಿಕರನ್ನು ನಿನ್ನೆ (ನ.28) ರಾತ್ರಿ ಯಶಸ್ವಿಯಾಗಿ ಹೊರಗೆ ಕರೆತರಲಾಯಿತು. ಕಳೆದ 17 ದಿನಗಳಿಂದ ಕತ್ತಲೆ ಕೂಪದಲ್ಲಿ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬೆಳಕಿಗಾಗಿ ಪರಿತಪಿಸುತ್ತಾ, ನೆಚ್ಚಿನ ದೇವರಲ್ಲಿ ಇನ್ನೊಂದು ಅವಕಾಶಕ್ಕಾಗಿ ಬೇಡಿಕೊಳ್ಳುತ್ತಿದ್ದ ಕಾರ್ಮಿಕರಿಗೆ ದೇವರು ಮತ್ತೊಂದು ಅವಕಾಶ ನೀಡಿದ್ದು, ದೇಶದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

  ಸುರಂಗದಿಂದ ಹೊರಬಂದ ಕಾರ್ಮಿಕರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಅಲ್ಲದೆ, ಸಿಹಿ ಹಂಚಿ ಸಂಭ್ರಮಿಸಲಾಯಿತು. ತಮ್ಮ ಜೀವನ ಕರಾಳ ಕ್ಷಣದ ಬಗ್ಗೆ ಮಾತನಾಡಿದ ಕಾರ್ಮಿಕ ಅಖಿಲೇಶ್​ ಸಿಂಗ್​, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸುರಂಗವು ನನ್ನ ಮುಂದೆಯೇ ಕುಸಿದುಬಿತ್ತು. ಆ ಶಬ್ದಕ್ಕೆ ನನ್ನ ಕಿವಿಗಳೇ ಮರಗಟ್ಟಿತೆಂದು ಹೇಳಿದ್ದಾರೆ.

  ಘಟನೆ ನಡೆದ ಬಳಿಕ ಸುಮಾರು 18 ಗಂಟೆಗಳವರೆಗೆ ನಾವು ಯಾವುದೇ ಸಂಪರ್ಕವನ್ನು ಹೊಂದಲಿಲ್ಲ. ನಮಗೆ ನೀಡಿದ ತರಬೇತಿಯ ಪ್ರಕಾರ ಸುರಂಗದಲ್ಲಿ ಸಿಲುಕುತ್ತಿದ್ದಂತೆ ಶೀಘ್ರವೇ ನೀರಿನ ಪೈಪ್​ ಅನ್ನು ಓಪನ್​ ಮಾಡಿದೆವು. ಯಾವಾಗ ನೀರು ಸುರಿಯಲು ಆರಂಭಿಸಿತೋ ಆಗ ಹೊರಗಿನ ಮಂದಿಗೆ ನಾವು ಸುರಂಗದಲ್ಲಿ ಸಿಲುಕಿರುವುದು ತಿಳಿಯಿತು. ತಕ್ಷಣ ಅವರು ನಮಗೆ ಪೈಪ್​ ಮೂಲಕ ಆಮ್ಲಜನಕ ಪೂರೈಕೆ ಮಾಡಿದರು ಎಂದು ಅಖಿಲೇಶ್​ ಸಿಂಗ್​ ತಿಳಿಸಿದರು.

  ರಕ್ಷಣಾ ಪಡೆಗಳು ಸುರಂಗದ ಅವಶೇಷಗಳ ಮೂಲಕ ಉಕ್ಕಿನ ಪೈಪ್ ಅನ್ನು ಅಳವಡಿಸುವಲ್ಲಿ ಯಶಸ್ವಿಯಾಗಿ ದಿನವಿಡೀ ನಮಗೆ ಆಹಾರವನ್ನು ಕಳುಹಿಸುತ್ತಿದ್ದರು. ಎಷ್ಟರಮಟ್ಟಿಗೆ ಅಂದರೆ, ಸುರಂಗದಲ್ಲಿ ಇನ್ನೂ 25 ದಿನಗಳವರೆಗೆ ಸಾಕಾಗುವಷ್ಟು ಆಹಾರವಿದೆ ಎಂದು ತಿಳಿಸಿದರು.

  ಮುಂದಿನ ನನ್ನ ಪ್ಲ್ಯಾನ್​ ಏನೆಂದರೆ, ಆರೋಗ್ಯ ತಪಾಸಣೆ ಮಾಡಿಸಿಕೊಂಡ ಬಳಿಕ ಮನೆಗೆ ಹೋಗಿ 1 ರಿಂದ 2 ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ಆ ಬಳಿಕ ಮುಂದೇನು ಮಾಡಬೇಕು ಎಂದು ಯೋಚಿಸುತ್ತೇನೆ ಎಂದರು.

  ರಕ್ಷಣಾ ಕಾರ್ಯದ ಹಾದಿ…
  * ನವೆಂಬರ್ 12: ದೀಪಾವಳಿಯ ದಿನ ಬೆಳಗ್ಗೆ 5.30ರ ಸುಮಾರಿಗೆ ಸುರಂಗದಲ್ಲಿ ಭೂಕುಸಿತ. ಎನ್​ಡಿಆರ್​ಎಫ್ ಸಹಿತ ಅನೇಕ ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿ.
  * ನ.13: ಕಾರ್ವಿುಕರು ಸುರಕ್ಷಿತವಾಗಿದ್ದಾರೆ ಎಂದು ವರದಿ. ತೆರವು ಕಾರ್ಯ ಆರಂಭಮಾಡುತ್ತಿದ್ದಂತೆ ಮತ್ತೆ ಕುಸಿತ. ಸುಮಾರು 30 ಮೀಟರ್ ಪ್ರದೇಶದಲ್ಲಿ ಸಂಗ್ರಹವಾದ ಶಿಲಾಖಂಡರಾಶಿಗಳು 60 ಮೀಟರ್​ಗಳಿಗೆ ವಿಸ್ತರಣೆ.
  * ನ.14: 900 ಮಿಲಿ ಮೀಟರ್ ವ್ಯಾಸದ ಉಕ್ಕಿನ ಕೊಳವೆಗಳನ್ನು ಒಳಗೆ ತೂರಿಸುವ ಸಲುವಾಗಿ ಆಗರ್ ಯಂತ್ರ ಸ್ಥಳಕ್ಕೆ ರವಾನೆ.
  * ನ.16: ಕೊರೆಯುವ ಯಂತ್ರವನ್ನು ಜೋಡಿಸಿ, ಮಧ್ಯರಾತ್ರಿಯ ನಂತರ ಕೆಲಸ ಪ್ರಾರಂಭ.
  * ನ.17: ಯಂತ್ರವು ಮಧ್ಯಾಹ್ನದ ವೇಳೆಗೆ 24 ಮೀಟರ್ ಕೊರೆಯುವಲ್ಲಿ ಯಶಸ್ವಿ. ಇನ್ನೂ 4 ಪೈಪ್ ಅಳವಡಿಕೆ. ಐದನೇ ಪೈಪ್ ಜೋಡಣೆ ವೇಳೆ ತಾಂತ್ರಿಕ ದೋಷ. ಸಂಜೆ ವೇಳೆಗೆ ಸುರಂಗದಲ್ಲಿ ದೊಡ್ಡ ಬಿರುಕು, ಧ್ವನಿ ಕೇಳಿ ಬಂದ ಬಗ್ಗೆ ವರದಿ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಕುಸಿತದ ಸಾಧ್ಯತೆಯ ಬಗ್ಗೆ ತಜ್ಞರ ಎಚ್ಚರಿಕೆ. ಕಾರ್ಯಾಚರಣೆ ಸ್ಥಗಿತ.
  * ನ.15: ಮೊದಲ ಡ್ರಿಲ್ಲಿಂಗ್ ಮೆಷಿನ್ ಕೆಲಸ ವಿಫಲಗೊಂಡ ಕಾರಣ ಅತ್ಯಾಧುನಿಕ ಆಗರ್ ಯಂತ್ರ ದೆಹಲಿಯಿಂದ ವಾಯುಪಡೆ ವಿಮಾನ ಮೂಲಕ ರವಾನೆ
  * ನ.18: ಕಾರ್ವಿುಕರನ್ನು ರಕ್ಷಿಸಲು ಸುರಂಗದ ಮೇಲ್ಭಾಗದಲ್ಲಿ ಲಂಬವಾಗಿ ಸಣ್ಣ ಸುರಂಗ ಕೊರೆಯುವುದು ಸೇರಿ ಏಕಕಾಲದಲ್ಲಿ ಐದು ಯೋಜನೆಗಳಲ್ಲಿ ಕೆಲಸ ಮಾಡಲು ನಿರ್ಧಾರ. ಪರ್ಯಾಯ ಆಯ್ಕೆಗಳ ಬಗ್ಗೆ ಪರಿಶೀಲನೆ.
  * ನ.20: ಪ್ರಧಾನಿ ಮೋದಿ, ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ದೂರವಾಣಿ ಮೂಲಕ ಮಾತುಕತೆ. ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ. ಹೆವಿ-ಡ್ಯೂಟಿ ಆಗರ್ ಯಂತ್ರದ ಡ್ರಿಲ್ಲಿಂಗ್​ಗೆ ಬಂಡೆ ಕಾಣಿಸಿಕೊಂಡ ನಂತರ ಕಾರ್ಯ ಸ್ಥಗಿತ.
  * ನ. 21: ಸುರಂಗದೊಳಗೆ ಕ್ಯಾಮರಾ ಕಳಿಸುವಲ್ಲಿ ಯಶಸ್ವಿ. ಕಾರ್ವಿುಕರು ಆಹಾರ ಪದಾರ್ಥಗಳನ್ನು ಸೇವಿಸುವುದು, ಪರಸ್ಪರ ಮಾತನಾಡುತ್ತಿರುವ ಮೊದಲ ವೀಡಿಯೊ ಬಹಿರಂಗ.
  * ನ.22: ಸುರಂಗದ ಹೊರಗೆ ಆಂಬ್ಯುಲೆನ್ಸ್​ಗಳು ಸಿದ್ಧ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ವಾರ್ಡ್. 57 ಮೀಟರ್ ಡ್ರಿಲ್ಲಿಂಗ್ ಯಶಸ್ವಿ. ಇನ್ನು ಕೇವಲ 12 ಮೀಟರ್ ಬಾಕಿ. ಸಂಜೆ ವೇಳೆಗೆ ಕೆಲವು ಕಬ್ಬಿಣದ ರಾಡ್​ಗಳು ಆಗರ್ ಯಂತ್ರದ ದಾರಿಗೆ ಅಡ್ಡ ಬಂದಾಗ ಕೊರೆಯುವಿಕೆ ಸ್ಥಗಿತ.
  * ನ.23: ರಕ್ಷಣಾ ಕಾರ್ಯಾಚರಣೆ ಪುನರಾರಂಭ. ಕೊರೆಯುವ ಯಂತ್ರ ನಿಂತಿರುವ ಪ್ಲಾಟ್​ಫಾಮ್ರ್ ನಲ್ಲಿ ಬಿರುಕಿನಿಂದ ಮತ್ತೆ ಕಾರ್ಯಾಚರಣೆಗೆ ಅಡ್ಡಿ.
  * ನ.24: ಬೆಳಗ್ಗೆ ಕೊರೆಯುವ ಕೆಲಸ ಆರಂಭಿಸಿದಾಗ ಆಗರ್ ಯಂತ್ರದ ದಾರಿಯಲ್ಲಿ ಸ್ಟೀಲ್ ಪೈಪ್ ಅಡ್ಡ ಬಂದ ಕಾರಣ ಆಗರ್ ಯಂತ್ರಕ್ಕೆ ಹಾನಿ. ಕಾರ್ಯಾಚರಣೆ ಸ್ಥಗಿತ.
  * ನ.25: ಕಾರ್ವಿುಕರ ರಕ್ಷಣೆಗೆ ಇರುವ ಇತರ ಆಯ್ಕೆಗಳ ಬಗ್ಗೆ ಪರಿಶೀಲನೆ. ಸುರಂಗದ ಮೇಲಿನಿಂದ ಲಂಬವಾಗಿ ಕೊರೆಯಲು ಸಿದ್ಧತೆ ಆರಂಭ.
  * ನ.26: ಲಂಬವಾಗಿ ಕೊರೆಯುವಿಕೆ ಪ್ರಕ್ರಿಯೆ ರಾತ್ರಿ 11 ಗಂಟೆಯವರೆಗೆ 20 ಮೀಟರ್ ವರೆಗೆ ನಡೆಯಿತು.
  * ನ.27: ಸಂಜೆಯ ವೇಳೆಗೆ ಆಗರ್ ಯಂತ್ರದ ಹೊರತೆಗೆಯ ಲಾಯಿತು. ರ್ಯಾಟ್ ಹೋಲ್ ಮೈನರ್ಸ್​ರಿಂದ ಭೌತಿಕವಾಗಿ ಅಗೆಯುವ ಕೆಲಸ ಆರಂಭ
  * ನ.28: ರ್ಯಾಟ್ ಹೋಲ್ ಮೈನರ್ಸ್ ಕೊರೆದ ರಂಧ್ರದ ಮೂಲಕ ಉಕ್ಕಿನ ಪೈಪ್ ಅಳವಡಿಕೆ ಯಶಸ್ವಿ. ಈ ಪೈಪ್ ಮೂಲಕ ಕಾರ್ವಿುಕರು ಸುರಂಗದಿಂದ ಹೊರಕ್ಕೆ.

  ಏನಿದು ಯೋಜನೆ?: 4.5 ಕಿ.ಮೀ. ಉದ್ದದ ಸುರಂಗವು ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ಚಾರ್ ಧಾಮ್ ಹೆದ್ದಾರಿ ಯೋಜನೆಯ ಭಾಗವಾಗಿದೆ. ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದು ಪುಣ್ಯಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಕಾ್ಯರಾ ಮತ್ತು ದಂಡಲ್ಗಾಂವ್ ಸಂರ್ಪಸುವ ಮಾರ್ಗದಲ್ಲಿದೆ. ಇದು ಡಬಲ್ ಲೇನ್ ಸುರಂಗವಾಗಿದ್ದು, ಅತಿ ಉದ್ದದ ಸುರಂಗವಾಗಿದೆ. ಇದು ಪೂರ್ಣಗೊಂಡ ನಂತರ ಒಟ್ಟು ಪ್ರಯಾಣದ ಸಮಯದಲ್ಲಿ ಒಂದು ಗಂಟೆ ಉಳಿತಾಯವಾಗಲಿದೆ. ಸುರಂಗ ನಿರ್ವಿುಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ನಡೆಸುತ್ತಿದೆ. (ಏಜೆನ್ಸೀಸ್​)

  ಸಾವು ಗೆದ್ದು ಬಂದ ಶ್ರಮಿಕರ ಜತೆ ಫೋನ್​ನಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts