ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಯಾವುದೇ ಸ್ವಹಿತಾಸಕ್ತಿ ಹುದ್ದೆಗಳನ್ನು ಹೊಂದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಓಂಬುಡ್ಸ್ಮನ್ ಮತ್ತು ನೈತಿಕತೆ ಅಧಿಕಾರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್ ತೀರ್ಪು ನೀಡಿದ್ದಾರೆ. ತನ್ಮೂಲಕ ರಾಹುಲ್ ದ್ರಾವಿಡ್ ಆರೋಪಮುಕ್ತಗೊಳಿಸಿದ್ದಾರೆ.
ಬಿಸಿಸಿಐನ ನಿಯಮದಲ್ಲಿ ಉಲ್ಲೇಖಿಸಲಾಗಿರುವಂತೆ ರಾಹುಲ್ ದ್ರಾವಿಡ್ ಅವರು ಯಾವುದೇ ಸ್ವಹಿತಾಸಕ್ತಿ ಹುದ್ದೆಯನ್ನೂ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕನ ವಿರುದ್ಧ ಮಾಡಲಾಗಿದ್ದ ಎಲ್ಲ ಆರೋಪಗಳು ಆಧಾರರಹಿತ ಎಂಬುದು ಸಾಬೀತಾಗಿರುವುದಾಗಿ ತೀರ್ಪಿನಲ್ಲಿ ವಿವರಿಸಿದ್ದಾರೆ.
ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ವಿ.ವಿ.ಎಸ್. ಲಕ್ಷ್ಮಣ್ ವಿರುದ್ಧ ಇದೇ ಬಗೆಯ ಆರೋಪಗಳು ಕೇಳಿಬಂದಿದ್ದವು. ಆ ಪ್ರಕರಣಗಳಲ್ಲಿ ಏನೆಲ್ಲ ಅಂಶಗಳನ್ನು ಪರಿಗಣಿಸಿ ಅವರನ್ನು ಆರೋಪಮುಕ್ತಗೊಳಿಸಲಾಗಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಿ, ರಾಹುಲ್ ದ್ರಾವಿಡ್ ಪ್ರಕರಣದಲ್ಲಿ ತೀರ್ಪು ನೀಡಬೇಕು ಎಂಬ ಉದ್ದೇಶದಿಂದ ನ.12ರಂದು ಎರಡನೇ ಬಾರಿಗೆ ಪ್ರಕರಣದ ವಿಚಾರಣೆ ನಡೆಸಲಾಗಿತ್ತು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಅಜೀವ ಸದಸ್ಯ ಸಂಜೀವ್ ಗುಪ್ತಾ ಅವರು ಬೆಂಗಳೂರಿನಲ್ಲಿರುವ ಎನ್ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ವಿರುದ್ಧ ಸ್ವಹಿತಾಸಕ್ತಿ ಹುದ್ದೆ ಹೊಂದಿರುವ ಬಗ್ಗೆ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಬಿಸಿಸಿಐನ ನೈತಿಕ ಸಮಿತಿ ದ್ರಾವಿಡ್ ಅವರಿಗೆ ಸ್ವಹಿತಾಸಕ್ತಿ ಹುದ್ದೆ ಹೊಂದಿರುವ ಕುರಿತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಎನ್ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಇಂಡಿಯಾ ಸಿಮೆಂಟ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಆದರೆ ತಾವು ಯಾವುದೇ ಸ್ವಹಿತಾಸಕ್ತಿ ಹುದ್ದೆಯನ್ನು ಹೊಂದಿಲ್ಲ. ಸದ್ಯಕ್ಕೆ ಇಂಡಿಯಾ ಸಿಮೆಂಟ್ಸ್ ಕಂಪನಿಯಿಂದ ಆ ಹುದ್ದೆಯ ನಿರ್ವಹಣೆಯಿಂದ ಬಿಡುಗಡೆ ಪತ್ರ ಪಡೆದುಕೊಂಡಿರುವುದಾಗಿ ವಿಚಾರಣೆ ವೇಳೆ ವಾದಿಸಿದ್ದರು. (ಏಜೆನ್ಸೀಸ್)