ಸಿದ್ದರಾಮಯ್ಯರದ್ದು ವಿಶ್ವಾಸದ ಪ್ರೀತಿಯೋ,ಕಾಲೆಳೆಯೋ ಪ್ರೀತಿಯೋ ಗೊತ್ತಿಲ್ಲ: ಅರವಿಂದ ಲಿಂಬಾವಳಿ

ಕಲಬುರಗಿ: ಚಿಂಚೋಳಿಯಲ್ಲಿ ಸಿಎಂ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದರು. ಇಂದು ಸಿದ್ದರಾಮಯ್ಯ ಕಾಂಗ್ರೆಸ್​, ಜೆಡಿಎಸ್​ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಬಹಳ ಜನರಿದ್ದು ಅವರಲ್ಲಿ ರೇವಣ್ಣ ಕೂಡಾ ಒಬ್ಬರು ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಇದು ವಿಶ್ವಾಸದ ಪ್ರೀತಿಯೋ, ಕಾಲೆಳೆಯೋ ಪ್ರೀತಿಯೋ ಗೊತ್ತಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ.

ಚಿಂಚೋಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದಿನಕೊಬ್ಬರು ಸಿಎಂ ಸ್ಥಾನದ ಬಗ್ಗೆ ತಮ್ಮ ಹೇಳಿಕೆ ನೀಡುತ್ತಿರುವುದು ನೋಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿಯುತ್ತದೆ. ಕಾಂಗ್ರೆಸ್​-ಜೆಡಿಎಸ್​ನವರು ಪ್ರಚಾರ ನಡೆಸುತ್ತಿದ್ದೀರೋ, ಇಲ್ಲವೇ ಕಿತ್ತಾಟ ನಡೆಸುತ್ತಿದ್ದರೋ ಎಂದ ಅವರು, ಎಷ್ಟೇ ಕಿತ್ತಾಟ ಮಾಡಿದರೂ‌ ಜನರು ವೋಟ್ ಹಾಕ್ತಾರೆ ಅಂದು ಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಚುನಾವಣೆ ನಂತರ ಸರ್ಕಾರ ಉಳಿಯಲ್ಲ. ಮತ್ತಷ್ಟು ಉಪ ಚುನಾವಣೆ ಬರಬಹುದು ಎಂದ ಅವರು, ಬಿಜೆಪಿ ಬೆಂಬಲಕ್ಕೆ ಹಲವು‌ ನಾಯಕರು ರಾಜೀನಾಮೆ ನೀಡಬಹುದು. ಆದರೆ, ಮಹಾಚುನಾವಣೆ ತಪ್ಪಿಸುತ್ತೇವೆ. ರಮೇಶ್ ಜಾರಕಿಹೊಳಿ‌ ಮಾತ್ರವಲ್ಲ ಬೇರೆ ಶಾಸಕರು ಬಿಜೆಪಿಗೆ ಬರಬಹುದು. ಮೈತ್ರಿ ಸರ್ಕಾರದ ಸಂಖ್ಯಾ ಬಲ ಕಡಿಮೆಯಾಗುವುದು‌ ಖಚಿತ ಎಂದರು.

ಮೊದಲು ಜೆಡಿಎಸ್​-ಕಾಂಗ್ರೆಸ್​ ತಮ್ಮಲ್ಲಿ ಇರುವವರನ್ನು ಸರಿಯಾಗಿ ಇಟ್ಟುಕೊಳ್ಳಲಿ. ನಂತರ ಆಪರೇಷನ್ ಹಸ್ತ ಮಾಡಲಿ ಎಂದು ಕುಟುಕಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *