ಸದೇಶ್ ಕಾರ್ಮಾಡ್ ಮೈಸೂರು
ಪ್ರತಿ ಬಾರಿ ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಎದುರಾಗುವುದು ಸಾಮಾನ್ಯ. ಆದರೆ, ಕಳೆದ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ದಾಸ್ತಾನು ಇದ್ದು, ಇದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಒಂದು ವರ್ಷಕ್ಕೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ಒಂದುವೇಳೆ ಪರಿಸ್ಥಿತಿ ಕೈ ಮೇರಿ ಹೋದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯಲ್ಲಿ 5.14 ಲಕ್ಷ ಹಸು, ಎತ್ತುಗಳು, 4.11 ಲಕ್ಷ ಕುರಿ, ಮೇಕೆಗಳು ಇವೆ. ಮೈಸೂರು ತಾಲೂಕಿನಲ್ಲಿ 1,07,570 ಟನ್ ಮೇವು ದಾಸ್ತಾನು ಇದೆ. ಅದೇ ರೀತಿ ನಂಜನಗೂಡಿನಲ್ಲಿ 1,78,200 ಟನ್, ಕೆ.ಆರ್. ನಗರದಲ್ಲಿ 1,06,579 ಟನ್, ಹುಣಸೂರಿನಲ್ಲಿ 1,51,897, ಪಿರಿಯಾಪಟ್ಟಣದಲ್ಲಿ 1,44,509 ಟನ್, ಎಚ್.ಡಿ. ಕೋಟೆಯಲ್ಲಿ 1,21,457 ಟನ್, ಸರಗೂರಿನಲ್ಲಿ 68,289 ಟನ್, ಸಾಲಿಗ್ರಾಮದಲ್ಲಿ 87,441 ಟನ್ ಮೇವು ದಾಸ್ತಾನು ಇದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ, ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದರ ಜತೆಗೆ ಕೆಎಂಎಫ್‌ನಿಂದ ರೈತರಿಗೆ ಮೇವಿನ ಮರದ ಸಸಿಗಳನ್ನು ನೀಡಲಾಗಿದ್ದು, ಸಾಕಷ್ಟು ರೈತರು ತಮ್ಮ ಹೊಲದ ಬದುಗಳಲ್ಲಿ ಸಸಿಗಳನ್ನು ನೆಟ್ಟಿದ್ದು, ಇವುಗಳು ಇದೀಗ ಮರವಾಗಿ ಬೆಳೆದು ನಿಂತಿದೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಮೇವು ಸಹ ಜಾನುವಾರು ಗಳಿಗೆ ದೊರೆಯಲಿದೆ.
ಸಾಮಾನ್ಯವಾಗಿ ಪ್ರತಿ ಬಾರಿ ಬರಗಾಲ ಎದುರಾದ ಸಂದರ್ಭದಲ್ಲಿ ತಿ.ನರಸೀಪುರ ತಾಲೂಕಿನ ಕವಲಂದೆ, ಚಿದರವಳ್ಳಿ, ಮೈಸೂರು ತಾಲೂಕಿನ ಜಯಪುರ, ಬಿಳಿಕೆರೆ ವ್ಯಾಪ್ತಿಯಲ್ಲಿ ಮೊದಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಈ ಗ್ರಾಮಗಳಲ್ಲಿ ಮೇವಿನ ಕೊರತೆ ಕಂಡು ಬಂದಿಲ್ಲ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರಸ್ತುತ ರೈತರ ಮನೆಗೆಳಿಗೆ ಭೇಟಿ ನೀಡಿ ಲಸಿಕಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಜತೆಗೆ ಮೇವು ಹಾಗೂ ನೀರಿನ ಕೊರತೆಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಯಾವುದೇ ಗ್ರಾಮದಲ್ಲಿ ಮೇವಿನ ಕೊರತೆ ಕಂಡು ಬಂದರೆ ತಕ್ಷಣ ಸ್ಪಂದಿಸಲು ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂ ಡಿದ್ದಾರೆ. ಆರ್ಥಿಕ ವರ್ಷ 2024-25ನೇ ಸಾಲಿನಲ್ಲಿ ರೈತರಿಗೆ ಒಟ್ಟು 24,128 ಕೆ.ಜಿ. ಮೇವಿನ ಮಿನಿ ಕಿಟ್ ವಿತರಣೆ ಮಾಡಲಾಗಿದೆ. ಪ್ರಸ್ತುತ 11,298 ಮೇವಿನ ಕಿಟ್ ಲಭ್ಯವಿದೆ.
ಬೇಸಿಗೆ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿ ತಂಪಾದ ವಾತಾವರಣ ನಿರ್ಮಾಣ ಮಾಡುವಂತೆ, ಬಿಸಿಲಿನಲ್ಲಿ ಜಾನುವಾರುಗಳನ್ನು ಮೇಯಿ ಸದಂತೆ ಹಾಗೂ ನೀರಿನ ತೊಟ್ಟಿಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ರೈತರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮೇವಿನ ಕೊರತೆ ಕಂಡು ಬರುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸಾಗಾಟಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಲು ಮುಂದಾಗಿಲ್ಲ. ಎಚ್.ಡಿ. ಕೋಟೆ ಭಾಗದಲ್ಲಿ ರೈತರು ಮೇವು ಬೆಳೆದು ಪಕ್ಕದ ಕೇರಳ ರಾಜ್ಯದವರಿಗೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತಿದೆ.
ತೊಟ್ಟಿ ನಿರ್ಮಾಣ: ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023ರಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ತೊಟ್ಟಿಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ನಡೆಯುತ್ತಿದೆ.
ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಸದ್ಯಕ್ಕೆ ಯಾವುದೇ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗದೆ ಇದ್ದರೂ ಬಿಸಿಲಿನ ತಾಪಮಾನ ಹೆಚ್ಚಾದರೆ ಏಪ್ರಿಲ್ ತಿಂಗಳಿನಿಂದ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಂದಾಜಿಸಿದೆ. ಏಪ್ರಿಲ್ 15 ರೊಳಗೆ 21 ಗ್ರಾಮಗಳು, 30ರೊಳಗೆ 62 ಗ್ರಾಮಗಳು, ಮೇ 15ಕ್ಕೆ 72 ಗ್ರಾಮಗಳು, 30ಕ್ಕೆ 88 ಗ್ರಾಮಗಳು, ಜೂನ್ 15ಕ್ಕೆ 91 ಗ್ರಾಮಗಳು, 30ಕ್ಕೆ 94 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೂರದಂತೆ ನೋಡಿಕೊಳ್ಳಲು 45 ಕೊಳವೆ ಬಾವಿಗಳನ್ನು ಕೊರೆಸಲು ಜಾಗ ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಮೇವಿನ ಕೊರತೆ ಕಂಡು ಬರುವ ಸಾಧ್ಯತೆ ಇಲ್ಲ. ಒಂದು ವರ್ಷಕ್ಕೆ ಸಾಕಾಗುವಷ್ಟು ಮೇವು ಜಿಲ್ಲೆಯ ರೈತರ ಬಳಿ ದಾಸ್ತಾನು ಇದೆ. ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವಿನ ಕಿಟ್ ವಿತರಣೆ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡು ಬಾರದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸಾಗಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಸದ್ಯದ ಮಟ್ಟಿಗೆ ಕಂಡು ಬಂದಿಲ್ಲ. ಇಲಾಖೆ ಅಧಿಕಾರಿಗಳು ಪ್ರತಿ ರೈತರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಿ.ನಾಗರಾಜು, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ