ಕಾಡದ ಕುಡಿವ ನೀರಿನ ಸಮಸ್ಯೆ

<ಕಿನ್ನಿಗೋಳಿ, ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಗೆ ಬಹುಗ್ರಾಮ ನೀರು ಯೋಜನೆ ಆಸರೆ>

ನಿಶಾಂತ್ ಶೆಟ್ಟಿ ಕಿಲೆಂಜೂರು

ಕಿನ್ನಿಗೋಳಿ, ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸದ್ಯ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕಳೆದ ಬಾರಿ ಮಾರ್ಚ್ ಮೊದಲ ವಾರದಲ್ಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತಾದರೂ ಈ ಬಾರಿ ಅಂಥ ಸಮಸ್ಯೆ ಕಂಡುಬಂದಿಲ್ಲ.

ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೊಳವೆಬಾವಿಗಳು ಇದ್ದರೂ ಅಂತರ್ಜಲ ಪ್ರಮಾಣ ಕಡಿಮೆಯಾಗಿದ್ದರಿಂದ ಬಾವಿ ಮತ್ತು ಕೊಳವೆಬಾವಿಗಳಲ್ಲಿ ಫೆಬ್ರವರಿ- ಮಾರ್ಚ್‌ನಲ್ಲೇ ನೀರಿನ ಪ್ರಮಾಣ ಕುಸಿದಿದ್ದು ಕೆಲ ಪ್ರದೇಶಗಳಿಗೆ ಟ್ಯಾಂಕರ್ ನೀರೇ ವರದಾನವಾಗಿತ್ತು. ಜುಲೈನಲ್ಲಿ ಸುರಿದ ಭಾರಿ ಮಳೆಯಿಂದ ನಂದಿನಿ ನದಿ ಉಕ್ಕಿ ಹರಿದು ನೆರೆ ಆವೃತವಾಗಿದ್ದರೂ, ನವೆಂಬರ್-ಡಿಸೆಂಬರ್‌ನಲ್ಲಿ ನಂದಿನಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಡಿಸೆಂಬರ್‌ನಲ್ಲೇ ಅಣೆಕಟ್ಟುಗಳ ಬಾಗಿಲು ಹಾಕಿದ್ದರೂ ನಿರೀಕ್ಷೆಯಷ್ಟು ನೀರು ಏರಿಕೆ ಕಂಡಿಲ್ಲ. ಆದರಿಂದ ಅನೇಕ ರೈತರು ಭತ್ತದ ಬೆಳೆಯನ್ನೇ ಮಾಡಿಲ್ಲ.

ಪ್ರಸಕ್ತ ನಂದಿನಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಅಂತರ್ಜಲ ಸಂಪೂರ್ಣ ಕುಸಿದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ತುಂಬ ಕಡಿಮೆ ಇರುವುದರಿಂದ ಕೆಮ್ರಾಲ್, ಕಿನ್ನಿಗೋಳಿ, ಮೆನ್ನಬೆಟ್ಟು ಪ್ರದೇಶಕ್ಕೆ ನೀರಿನ ಸಮಸ್ಯೆ ಬರಬೇಕಾಗಿತ್ತು. ಆದರೆ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಈ ಬಾರಿ ನೀರು ಸರಬರಾಜು ಆಗುತ್ತಿದ್ದು ಈ ಯೋಜನೆ ಪಂಚಾಯಿತಿಗಳಿಗೆ ಆಸರೆಯಾಗಿದೆ.

ಸಮಸ್ಯೆ ನೀಗಿಸಿದ ಯೋಜನೆ: ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಪದವು ಪ್ರದೇಶದಲ್ಲಿ 2010ರಲ್ಲಿ ಆರಂಭವಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಹೈದರಾಬಾದ್ ಮೂಲದ ಸಂಸ್ಥೆ ನಿರ್ಲಕ್ಷೃದಿಂದ ಏಳು ವರ್ಷವಾದರೂ ಪೂರ್ಣಗೊಂಡಿರಲಿಲ್ಲ. ಅನಂತರ ಮಂಗಳೂರಿನ ಮುಗ್ರೋಡಿ ಕಂಪನಿಗೆ ಈ ಕಾಮಗಾರಿ ನೀಡಿದ್ದು ಈ ಬಾರಿ ಶೇ.95ರಷ್ಟು ಕಾಮಗಾರಿ ಮುಗಿದಿದ್ದು ಸಣ್ಣಪುಟ್ಟ ಕೆಲಸ ನಡೆಯುತ್ತಿವೆ. ಬಳ್ಕುಂಜೆಯಲ್ಲಿ ಹರಿಯುವ ಶಾಂಭವಿ ನದಿಗೆ ಜಾಕ್‌ವೆಲ್ ನಿರ್ಮಿಸಿ ಕೊಲ್ಲೂರು ಪದವಿನಲ್ಲಿ ಸ್ಥಾವರ ರಚಿಸಿ ಮೆನ್ನಬೆಟ್ಟು, ಕಟೀಲು, ಕಿನ್ನಿಗೋಳಿ, ಬಳಕುಂಜೆ, ಕಿಲ್ಪಾಡಿ, ಪಡುಪಣಂಬೂರು, ಅತಿಕಾರಿಬೆಟ್ಟು, ಐಕಳ, ಕೆಮ್ರಾಲ್, ಹಳೆಯಂಗಡಿ ಗ್ರಾಪಂ ಸೇರಿದಂತೆ ಐದು ಪಂಚಾಯಿತಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು ದಿನಕ್ಕೆ 20 ಲಕ್ಷ ಲೀಟರ್‌ಗಿಂತಲೂ ಹೆಚ್ಚು ನೀರು ಪೂರೈಕೆಯಾಗುತ್ತಿದೆ. 10 ಪಂಚಾಯಿತಿಗಳ ಒಟ್ಟು 51 ಟ್ಯಾಂಕ್‌ಗಳಿಗೆ ಈ ನೀರು ಸರಬರಾಜಾಗುತ್ತಿದೆ. ಕಳೆದ ಬಾರಿ ಏಪ್ರಿಲ್-ಮೇ ಕೊನೇ ಭಾಗದಲ್ಲಿ ಉಪ್ಪು ನೀರು ಬಂದಿದ್ದರಿಂದ ಸಮಸ್ಯೆ ಆಗಿದ್ದು, ಈ ಬಾರಿಯೂ ಇದೇ ಪರಿಸ್ಥಿತಿ ಎದುರಾದರೆ ನೀರಿನ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಈ ಬಾರಿ ಯೋಜನೆ ವ್ಯಾಪ್ತಿಯ ಹಲವು ಪಂಚಾಯಿತಿಗಳ ನೀರಿನ ಸಮಸ್ಯೆ ನಿವಾರಣೆ ಆಗಿದೆ. ಈ ಹಿಂದಿನ ವರ್ಷಗಳಲ್ಲಿ ಮಾರ್ಚ್ ಅನಂತರ ನೀರಿನ ಸಮಸ್ಯೆ ಉದ್ಭವವಾಗುತ್ತಿತ್ತು. ಆದರೆ ಈ ಬಾರಿ ಆ ಸಮಸ್ಯೆ ಇಲ್ಲ. ಪ್ರತಿದಿನ ತಲಾ ಐದು ಪಂಚಾಯಿತಿಗಳಿಗೆ ದಿನವೊಂದಕ್ಕೆ ಸುಮಾರು 20 ಲಕ್ಷ ಲೀಟರ್‌ನಷ್ಟು ನೀರು ಒದಗಿಸಲಾಗುತ್ತಿದೆ. ಜಾಕ್‌ವೆಲ್ ಸಮೀಪದ ಶಾಂಭವಿ ನದಿಯಲ್ಲಿ ಕಳೆದ ಬಾರಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಉಪ್ಪು ನೀರು ಬಂದು ಸಮಸ್ಯೆ ಆಗಿತ್ತು. ಆ ರೀತಿ ಆಗದಿದ್ದರೆ, ಈ ಬಾರಿ ನೀರಿನ ಸಮಸ್ಯೆ ಬರುವುದಿಲ್ಲ.
ದಿವಾಕರ ಚೌಟ
ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಸಮಿತಿ ಅಧ್ಯಕ್ಷ