ಮೈಸೂರು: ಕಬಿನಿ ಜಲಾಶಯದ ಮುಖ್ಯಭಾಗದಲ್ಲಿ ಯಾವುದೇ ಸೋರಿಕೆ ಇರುವುದಿಲ್ಲ. ಡ್ಯಾಂ ಬಲದಂಡೆ ನಾಲೆಯ ಸ್ಲೂಯಿಸ್ ವಾಲ್‌ಗಳಲ್ಲಿ ಹಲವು ವರ್ಷಗಳಿಂದ ಸೋರಿಕೆ ಉಂಟಾಗುತ್ತಿದೆ.
ಈ ಕುರಿತು ತಜ್ಞರ ಸಮಿತಿ ಪರಿವೀಕ್ಷಣೆ ನಡೆಸಿ ವರದಿ ನೀಡಿದೆ. ಆ ವರದಿಯಲ್ಲಿ ‘ಹಿಂದಿನ ಮೂರು ವರ್ಷಗಳಿಂದ ಸೋರಿಕೆ ಉಂಟಾಗುತ್ತಿದೆ. ಸೋರಿಕೆಯಿಂದ ಬರುವ ನೀರು ಸ್ವಚ್ಛವಾಗಿರುವುದನ್ನು ಗಮನಿಸಲಾಗಿದೆ. ಈ ಸೋರಿಕೆಯಿಂದ ಜಲಾಶಯದ ಸುರಕ್ಷತೆಗೆ ಯಾವುದೇ ಅಪಾಯ ಹಾಗೂ ಆತಂಕ ಇಲ್ಲ’ ಎಂದು ತಿಳಿಸಲಾಗಿದೆ.
ತಜ್ಞರ ಸಮಿತಿ ಶಿಫಾರಸಿನಂತೆ ಸಿಸಿ ಕ್ಯಾಮರಾವನ್ನು ಅಳವಡಿಸಿ ಕಣ್ಗಾವಲಿನಲ್ಲಿ ಸೋರಿಕೆಯನ್ನು ನಿಯಮಿತವಾಗಿ ಪರಿವೀಕ್ಷಿಸಲು ತಿಳಿಸಲಾಗಿದೆ. ಜತೆಗೆ, ಸೋರಿಕೆಯ ಮೂಲವನ್ನು ವಿಡಿಯೋ ಚಿತ್ರೀಕರಣ ಮುಖಾಂತರ ವೀಕ್ಷಿಸಲೂ ನಿರ್ದೇಶನ ನೀಡಿದೆ.
ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾದಂತೆ ಸ್ವಚ್ಛವಾದ ನೀರಿನ ಸೋರಿಕೆಯು ಹೆಚ್ಚಾಗುತ್ತಿದೆ. ಸಂಗ್ರಹ ಕಡಿಮೆಯಾದಂತೆ ಸೋರಿಕೆ ಕಡಿಮೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.
ಡ್ರಿಪ್ ನೋಡಲ್ ಅಧಿಕಾರಿಗಳ ಸಲಹೆಯಂತೆ ನೀರಿನ ಒಳಗೆ ಸ್ವಯಂ ಚಾಲಿತ ರೋಬಾಟಿಕ್ ಪರಿವೀಕ್ಷಣೆ ಸಹ ನಡೆಸಲಾಗುತ್ತಿದೆ. ಅಲ್ಲದೆ, ಮತ್ತಷ್ಟು ವಿವರವಾಗಿ ಪರಿಶೀಲಿಸಲು ನೀರಿನ ಒಳಗೆ ವಿಡಿಯೋ ಚಿತ್ರೀಕರಣ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ನಿಗಮದ ಮುಖ್ಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಜು.29ರಂದು ಸೋರಿಕೆಯನ್ನು ಸರಿಪಡಿಸಲು ಮುಳುಗು ತಜ್ಞರ ತಂಡ ಪರಿವೀಕ್ಷಣೆ ನಡೆಸಿದ್ದು, ಈ ತಂಡ ನೀಡಿರುವ ವರದಿಯೊಂದಿಗೆ ನೀಡಿರುವ ಅಂದಾಜು ಪಟ್ಟಿಯನ್ನು ಸ್ವೀಕರಿಸಲಾಗಿದೆ. ಇದನ್ನು ಪರಿಶೀಲಿಸಿ ಜಲಾಶಯದ ನೀರಿನ ಸಂಗ್ರಹಣ ಮಟ್ಟ ಕಡಿಮೆಯಾದ ನಂತರ ಮುಂದಿನ 2025ರ ಫೆಬ್ರವರಿ ಮತ್ತು ಮೇ ಅವಧಿಯಲ್ಲಿ ಈ ಕಾಮಗಾರಿಯನ್ನು ನುರಿತ ತಜ್ಞರ ಸಲಹೆಯೊಂದಿಗೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಬಿನಿ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಬಿಡುವ ಜಾಗದಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದು ಡ್ಯಾಂನ ಕೆಳಭಾಗದ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಈ ಸ್ಪಷ್ಟನೆಯನ್ನು ನೀಡಿದೆ.