ಜಮಖಂಡಿ: ನಗರದ ತಾಲೂಕಾ ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಕಾರ್ಯಕ್ರಮ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೆ ಕಾಟಾಚಾರಕ್ಕೆ ಎಂಬಂತೆ ಮಾಡಿ ಮುಗಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೆ ಅಧಿಕಾರಿಗಳು ಜನಸ್ಪಂದನದ ಮೌಲ್ಯವನ್ನೇ ಹಾಳುಗೆಡುವುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಆರಂಭಿಸಿದ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡದೆ, ಕಾರ್ಯಕ್ರಮದಿಂದ ಪತ್ರಕರ್ತರನ್ನೂ ಹೊರಗಿಟ್ಟು ಜನಸ್ಪಂದನ ಕಾರ್ಯಕ್ರಮ ಮಾಡಿದ್ದು ಸಂಶಯಕ್ಕೆ ಎಡೆಮಾಡಿದೆ. ತಮ್ಮ ಕಾರ್ಯಕ್ಕೆ ಅಚಾನಕ್ಕಾಗಿ ಬಂದ ರೈತರೊಬ್ಬರು ಅರ್ಜಿಯನ್ನು ನೀಡಿದ್ದಾರೆ. ಜನಸ್ಪಂದನದಲ್ಲಿ ಒಟ್ಟು ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ತಹಸೀಲ್ದಾರ್ ಸದಾಶಿವ ಮಕ್ಕೋಜಿ ಪ್ರತಿಕ್ರಿಯಿಸಿ, ಜನಸ್ಪಂದನ ಕಾರ್ಯಕ್ರಮದ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ನಮ್ಮ ಸಿಬ್ಬಂದಿ ಅದನ್ನು ಪಾಲಿಸಿಲ್ಲ. ಇದನ್ನು ಸರಿಪಡಿಸಿಕೊಂಡು ಮುಂದಿನ ಜನಸ್ಪಂದನಕ್ಕೆ ಎಲ್ಲರಿಗೂ ಮಾಹಿತಿ ನೀಡಲಾಗುವುದು ಎಂದರು.