More

  ಭಾವನಾತ್ಮಕ ರಾಜಕಾರಣದ ಆಟ ನಡೆಯಲ್ಲ

  ಶಿಕಾರಿಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ, ಹಿಂದುಳಿದವರ ಪರವಾಗಿದೆ. ಗ್ಯಾರಂಟಿಗಳು ನಮಗೆ ಹೆಚ್ಚಿನ ಶಕ್ತಿ ತಂದುಕೊಟ್ಟಿವೆ. ಜನ ಪೊಳ್ಳು ಭರವಸೆ ನೀಡುವ ಬಿಜೆಪಿಗಿಂತ ವಾಸ್ತವ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದ ಕಡೆಗೆ ನೋಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

  ಸೋಮವಾರ ಸಾಂಸ್ಕೃತಿಕ ಭವನದಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಅವರ ಭಾವನಾತ್ಮಕ, ಒಡೆದಾಳುವ ನೀತಿ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.
  ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಸಮಸಮಾಜ ನಿರ್ಮಾಣವೇ ನಮ್ಮ ಗುರಿ. ನಮ್ಮ ರಾಜ್ಯದಿಂದ ಪ್ರತಿ ವರ್ಷ ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೆ ಅದು ನಮಗೆ ವಾಪಸ್ ಸಮರ್ಪಕವಾಗಿ ಬರುತ್ತಿಲ್ಲ. ನಮ್ಮ ತಂದೆ ದಿ. ಎಸ್.ಬಂಗಾರಪ್ಪ ಅವರಿಗೂ ಮತ್ತು ನನಗೂ ಸೊರಬ ಹಾಗೂ ಶಿಕಾರಿಪುರ ತಾಲೂಕುಗಳು ಎರಡು ಕಂಗಳು ಇದ್ದಂತೆ. ನಿಮ್ಮ ಅಭಿಮಾನ, ಸಂಭ್ರಮವನ್ನು ಕಂಡು ಆಶ್ಚರ್ಯಗೊಂಡಿದ್ದೇನೆ ಎಂದು ಹೇಳಿದರು.
  ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಅವರನ್ನು ಉದ್ಧಾರ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಬಡವರನ್ನು ಉದ್ಧಾರ ಮಾಡಿದ್ದಾರೆ. ಅಂಬೇಡ್ಕರ್, ಬಸವಣ್ಣನ ತತ್ವ, ಆದರ್ಶಗಳು ನಮ್ಮದಾಗಬೇಕು. ಸೊರಬ, ಶಿಕಾರಿಪುರ ತಾಲೂಕಿನ ಶಾಶ್ವತ ನೀರಾವರಿ ಯೋಜನೆಗಾಗಿ ಸೊರಬದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಮಾಡಿದ್ದು ನಾನು. ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುದಾನ ನೀಡಿದ್ದರು ಎಂದು ತಿಳಿಸಿದರು.
  ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನೇರ ನಡೆ, ನುಡಿಯ ವ್ಯಕ್ತಿತ್ವ. ಅವರ ಸಾಮಾಜಿಕ ಕಳಕಳಿ, ಹಿಂದುಳಿದವರ, ಬಡವರ, ಕೂಲಿಕಾರ್ಮಿಕರ ಬಗೆಗಿನ ಅವರ ಕಾಳಜಿ ಮೆಚ್ಚುವಂಥದ್ದು ಎಂದು ಹೇಳಿದರು.
  ಪುರಸಭೆ ಸದಸ್ಯ ಎಸ್.ಪಿ.ನಾಗರಾಜ್ ಗೌಡ ಮಾತನಾಡಿ, ಮಧು ಬಂಗಾರಪ್ಪ ಅವರ ಜನ್ಮೋತ್ಸವದ ನೆನಪಿನಲ್ಲಿ ತೆಂಗು, ಗಂಧದ ಸಸಿಗಳನ್ನು ವಿತರಿಸಲಾಗಿದೆ. ಅದನ್ನು ಬರಗಾಲದಲ್ಲಿ ಉಳಿಸಿ ಬೆಳೆಸಿ. ಸಚಿವರಾಗಿ ಮಧು ಬಂಗಾರಪ್ಪ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಕೊಡುಗೆ ಶಿವಮೊಗ್ಗ ಜಿಲ್ಲೆಗೆ ಸಾಕಷ್ಟಿದೆ. ಗೀತಕ್ಕ ಅವರು ಬಂಗಾರಪ್ಪ ಅವರ ಮಗಳು. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಮತಗಳನ್ನು ತಂದುಕೊಡುತ್ತೇವೆ ಎಂದು ಹೇಳಿದರು.
  ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕವಲಿ ಗಂಗಾಧರ್, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಪ್ರಮುಖರಾದ ಶ್ರೀಕಾಂತ್, ರವೀಂದ್ರ, ಭಂಡಾರಿ ಮಾಲತೇಶ್, ಉಳ್ಳಿ ದರ್ಶನ್, ಗೋಣಿ ಪ್ರಕಾಶ್, ರೋಷನ್, ಸುರೇಶ್, ಅನಿತಾಕುಮಾರಿ, ಪುಷ್ಪಾ, ರುದ್ರಗೌಡ, ರಾಘವೇಂದ್ರ ನಾಯ್ಕ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts