ಮೋದಿ ಮತ್ತು ದೀದಿಗೆ ವ್ಯತ್ಯಾಸವಿಲ್ಲ, ಇಬ್ಬರೂ ಸುಳ್ಳು ಭರವಸೆ ನೀಡಿ ಕಾಲಕಳೆಯುತ್ತಾರೆ: ರಾಹುಲ್​ ಗಾಂಧಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಬರೀ ಭರವಸೆಗಳನ್ನು ನೀಡುತ್ತಾರೆ ಹೊರತು ಅದನ್ನು ಈಡೇರಿಸುವುದಿಲ್ಲ ಎಂದಿದ್ದಾರೆ.
ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ಒಂದೇ ತರಹದವರು. ಜನರಿಗೆ ಭರವಸೆ ನೀಡುತ್ತಾರೆ ಹೊರತು ಅದನ್ನು ಪೂರೈಸುವುದಿಲ್ಲ ಎಂದು ಆರೋಪಿಸಿದ್ದಾರೆ.

ಮಹಾಮೈತ್ರಿ ವಿರುದ್ಧ ಇವತ್ತಿನವರೆಗೆ ಒಂದೇ ಒಂದೂ ಮಾತನಾಡದೆ ಇದ್ದ ರಾಹುಲ್​ ಗಾಂಧಿ ಇದೇ ಮೊದಲಬಾರಿಗೆ ಮಾಲ್ಡಾ ಜಿಲ್ಲೆಯಲ್ಲಿ ನಡೆಸಿದ ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆಯಾ? ರೈತರಿಗೆ ಏನಾದರೂ ಅನುಕೂಲವಾಗಿದೆಯಾ ಎಂದು ಪ್ರಶ್ನಿಸಿದ ರಾಹುಲ್​, ಒಂದೆಡೆ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಇನ್ನೊಂದೆಡೆ ನಿಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಳ್ಳು ಹೇಳಿ ನಂಬಿಸುತ್ತಿದ್ದಾರೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷ ಸಿಪಿಎಂ ಆಡಳಿತವಿತ್ತು. ಅದಾದ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಇಲ್ಲಿನ ಜನರೇ ಆಯ್ಕೆ ಮಾಡಿದರು. ಆದರೆ ಏನು ವ್ಯತ್ಯಾಸವಾಗಿದೆ. ಆಗ ನಡೆಯುತ್ತಿದ್ದ ದೌರ್ಜನ್ಯಗಳೇ ಇಂದಿಗೂ ಮುಂದುವರಿದಿವೆ. ಸಿಪಿಎಂ ಪಕ್ಷದ ಉದ್ಧಾರಕ್ಕಾಗಿ ಸರ್ಕಾರವನ್ನು ಬಳಸಿಕೊಂಡಿತು. ಈಗ ವ್ಯಕ್ತಿಯ ಉದ್ಧಾರಕ್ಕಾಗಿ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದರು.