ಗಂಗಾವತಿ: ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸನ್ನದ್ಧರಾಗಬೇಕಿದ್ದು, ಭಯೋತ್ಪಾದನೆ ವಿರುದ್ಧ ಸಾಂಕ ಹೋರಾಟದ ಅಗತ್ಯವಿದೆ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ವಿವಿಧ ಮೋರ್ಚಾ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಪಹಲ್ಗಾಮ್ ಪ್ರಕರಣದ ನಂತರ ಭಾರತ ತನ್ನ ವಿರಾಟ ರೂಪವನ್ನು ಶತೃ ರಾಷ್ಟ್ರಗಳಿಗೆ ಸೇನೆಯ ಮೂಲಕ ತೋರಿಸಿದೆ. ರಾಷ್ಟ್ರದ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜೀಯಾಗುವ ಜಾಯಮಾನ ದೇಶದ ನಾಗರಿಕರಲ್ಲಿಲ್ಲ. ಆಪರೇಷನ್ ಸಿಂಧೂರ ಮೂಲಕ ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಕ್ಷಣೆಯ ದೂರದೃಷ್ಟಿ ಆಡಳಿತವೇ ಕಾರಣ. ಪಕ್ಷಾತೀತವಾಗಿ ತಿರಂಗಾ ಯಾತ್ರೆಗೆ ಬೆಂಬಲ ನೀಡಿರುವುದು ಒಗ್ಗಟ್ಟಿನ ಮಂತ್ರವಾಗಿದೆ ಎಂದರು.
ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ರಾಷ್ಟ್ರ ರಕ್ಷಣೆಯಲ್ಲಿರುವ ಯೋಧರನ್ನು ನಿತ್ಯ ಸ್ಮರಿಸಬೇಕಿದ್ದು, ಸಮಯೋಚಿತ ಹೋರಾಟದ ಮೂಲಕ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದ್ದಾರೆ. ಸಾಮರಸ್ಯ ಮತ್ತು ಶಾಂತಿಗಾಗಿ ಪ್ರತಿಯೊಬ್ಬರೂ ಒಂದಾಗಬೇಕಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದರು.
ಮಾಜಿ ಸಂಸದ ಎಸ್.ಶಿವರಾಮೇಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಹಿರಿಯ ವೈದ್ಯ ವಿ.ವಿ.ಚಿನಿವಾಲರ್, ನಿವೃತ್ತ ಸೈನಿಕ ಶಿವನಗೌಡ ಮಾತನಾಡಿದರು. ನಿವೃತ್ತ ಯೋಧರಾದ ಬಸವರಾಜ ಕಟಾಂಬ್ಲಿ, ಶಿವನಗೌಡ, ಮಂಜುನಾಥ ಹುಸೇನ್ ಸಾಬ್, ಪ್ರಕಾಶ ಹುಯಿಲ್‌ಗೋಳ್ ಅವರನ್ನು ಸನ್ಮಾನಿಸಲಾಯಿತು.
ಬೃಹತ್ ರ‌್ಯಾಲಿ:
ಇದಕ್ಕೂ ಮೊದಲು ನಗರದ ಶ್ರೀಕೊಟ್ಟೂರುಬಸವೇಶ್ವರ ದೇವಾಲಯದಿಂದ ಗಾಂಧಿ ವೃತ್ತದವರಿಗೆ ತ್ರಿವರ್ಣ ಧ್ವಜದೊಂದಿಗೆ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಅಕ್ಷರ ಪಬ್ಲಿಕ್ ಸ್ಕೂಲ್‌ನಿಂದ 100 ಮೀ. ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆ ನಡೆಯಿತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಸಾರ್ವಜನಿಕರು ೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಜೆಡಿಎಸ್ ಯುವ ಕಾರ್ಯಾಧ್ಯಕ್ಷ ರಾಜುನಾಯಕ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಮುಖಂಡರಾದ ಎಚ್.ಸಂಗಮೇಶ, ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಡಬ್ಲು.ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಸರ್ವೇಶ ವಸದ್, ಕೆ.ಚನ್ನಬಸಯ್ಯಸ್ವಾಮಿ, ರೇಖಾ ರಾಯಭಾಗಿ, ಹುಲಿಗೆಮ್ಮ ನಾಯಕ ಇತರರಿದ್ದರು. ಯಾತ್ರೆಗೆ ಸ್ಫೂರ್ತಿ ನರ್ಸಿಂಗ್ ಕಾಲೇಜು, ಸೆಂಟ್‌ಪಾಲ್ಸ್ ಸ್ಕೂಲ್, ಎಂಎಸ್‌ಎಂಎಸ್ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು, ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ವಿವಿಧ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.
ಕಾಂಗ್ರೆಸ್, ಜೆಡಿಎಸ್ ಸಾಥ್…
ತಿರಂಗಾ ಯಾತ್ರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಥ್ ನೀಡಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ, ಜೆಡಿಎಸ್ ಯುವ ಕಾರ್ಯಾಧ್ಯಕ್ಷ ರಾಜುನಾಯಕ ಬೆಂಬಲಿಗರು ಭಾಗವಹಿಸಿದ್ದು ವಿಶೇಷ. ಅನರ್ಹ ಶಾಸಕ ಗಾಲಿ ಜನಾರ್ದನರೆಡ್ಡಿ ಬೆಂಬಲಿಗರು ಭಾಗವಹಿಸಿದ್ದರಾದರೂ, ಲವಲವಿಕೆಯಲ್ಲಿರಲಿಲ್ಲ. ಭಾಗವಹಿಸಿದವರಿಗೆ ಮಜ್ಜಿಗೆ ವ್ಯವಸ್ಥೆ ಮಾಡಿತ್ತಾದರೂ, ತ್ಯಾಜ್ಯವನ್ನು ರಸ್ತೆಯಲ್ಲೆಲ್ಲ ಹರಡಿಕೊಂಡಿತ್ತು. ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ತ್ಯಾಜ್ಯ ಸಂಗ್ರಹಿಸಿ ಡಸ್ಟ್‌ಬೀನ್‌ಗೆ ಹಾಕುವ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆ ಮೆಲುಕು ಹಾಕಿದರು.ತಿರಂಗಾ ಯಾತ್ರೆಗೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದು, ತ್ರಿವರ್ಣ ಧ್ವಜದೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು. ಭಯೋತ್ಪಾದನೆ ವಿರುದ್ಧ ಸಾರ್ವಜನಿಕರ ಸಾಂಕ ಹೋರಾಟದ ಅಗತ್ಯವಿದೆ.
ಪರಣ್ಣಮುನವಳ್ಳಿ
ಮಾಜಿಶಾಸಕ, ಗಂಗಾವತಿ