More

    ಗಾಂಧೀಜಿ-ನೇತಾಜಿ ಹೋರಾಟದಲ್ಲಿ ಬಹಳ ವ್ಯತ್ಯಾಸವಿದೆ

    ಮೈಸೂರು: ಕ್ರಾಂತಿಕಾರಿ ಹೋರಾಟದ ಮೂಲಕ ತ್ವರಿತವಾಗಿ ಸ್ವಾತಂತ್ರೃ ಪಡೆಯುವುದು ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಉದ್ದೇಶವಾಗಿತ್ತು ಎಂದು ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಹೇಳಿದರು.

    ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ನೇತಾಜಿ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಮಾನಸಗಂಗೋತ್ರಿಯ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮಶತಾಬ್ದಿ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬೋಸ್ ಅವರು ದೇಶಕ್ಕಾಗಿ ಹೋರಾಡಿದವರಲ್ಲಿ ಮಹಾತ್ಮ ಗಾಂಧೀಜಿಗಿಂತ ಮೊದಲಿಗರು. ಉಭಯ ನಾಯಕರ ಹೋರಾಟದ ವಿಧಾನದಲ್ಲೂ ಬಹಳ ವ್ಯತ್ಯಾಸ ಇದೆ. ಕ್ರಾಂತಿಕಾರಿ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕೆಂಬುದು ನೇತಾಜಿ ಆಶಯವಾಗಿತ್ತು. ಆದರೆ, ಶಾಂತಿಯಿಂದ ಸ್ವಾತಂತ್ರ್ಯ ಪಡೆಯುವ ಮನೋಭಾವ ಗಾಂಧಿಯವರ ಉದ್ದೇಶವಾಗಿತ್ತು ಎಂದರು.

    ನೇತಾಜಿಯ ಧೈರ್ಯ, ಸ್ಥೈರ್ಯವನ್ನು ಯುವ ಜನರು ಮೈಗೂಡಿಸಿಕೊಳ್ಳವ ಮೂಲಕ ದೇಶ ರಕ್ಷಣೆಗೆ ಮುಂದಾಗಬೇಕು ಎಂದ ಅವರು, ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ತಿಳಿಸುವ ಕೆಲಸ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಮಹಾನ್ ಪುರುಷರ ಜೀವನ ಚರಿತ್ರೆ ಪಠ್ಯದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಬೇಕು ಎಂದರು.

    ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಗಾಂಧಿ, ನೆಹರು, ಅಂಬೇಡ್ಕರ್, ನೇತಾಜಿ ಎಲ್ಲರನ್ನೂ ಓದುವ ಮೂಲಕ ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು. ಅವರ ಧ್ಯೇಯ, ಆದರ್ಶಗಳು ಕೇವಲ ಸ್ವಾತಂತ್ರ್ಯಕ್ಕೆ ಸೀಮಿತವಾಗಿರಲಿಲ್ಲ. ಅದನ್ನೂ ಮೀರಿದ ಮನುಕುಲದ ಕಲ್ಯಾಣದ ಹೋರಾಟವಾಗಿತ್ತು ಎಂದರು.

    ಯಾವುದೇ ಕಾಲದಲ್ಲಿ ನಡೆದ ಚರಿತ್ರೆಯನ್ನು ಪುಸ್ತಕಗಳ ಮೂಲಕ ಅರಿತುಕೊಳ್ಳುತ್ತೇವೆ. ಹಿರಿಯರು ಹಾಕಿಕೊಟ್ಟ ಮೌಲ್ಯ ಮತ್ತು ಚಿಂತನೆ ನಾವು ಈಗಲೂ ಅನುಸರಿಸುವ ಮೂಲಕ ಬದುಕಿದ್ದೇವೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜ ಸುಧಾರಕರನ್ನು ಶ್ರೇಷ್ಠರು-ಕನಿಷ್ಠರು ಎಂಬ ಭಾವನೆಯಲ್ಲಿ ನೋಡದೆ ಒಟ್ಟಾಗಿ ನೋಡಬೇಕಿದೆ ಎಂದು ತಿಳಿಸಿದರು.

    ಗ್ರಂಥಪಾಲಕಿ ಡಾ.ಪಿ.ಸರಸ್ವತಿ ಮಾತನಾಡಿದರು. ಉಪ ಮೇಯರ್‌ಶ್ರೀಧರ್, ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ ಮೂರ್ತಿ ಇನ್ನಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts