ಸುಮಲತಾ ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ: ಡಿ ಕೆ ಶಿವಕುಮಾರ್‌

ಹುಬ್ಬಳ್ಳಿ: ಸುಮಲತಾ ಅಂಬರೀಷ್‌ ಅವರ ಮನವೊಲಿಸಲು ಯಾರು ಏನೂ ಹೇಳಿಲ್ಲ. ಆದರೆ ನಾನು ಅವರನ್ನು ಮಾತನಾಡಿಸಿ ಪಕ್ಷದ ನಿಲುವು ತಿಳಿಸಿದ್ದೆ. ಆದರೆ ಪಕ್ಷ ಈಗಾಗಲೇ ಮಂಡ್ಯ ವಿಚಾರದಲ್ಲಿ ತಿರ್ಮಾನ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸುಮಲತಾ ಕಾಂಗ್ರೆಸ್ ಪಕ್ಷದ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದ ಅವರು, ಸುಮಲತಾ ಅವರ ಬಗ್ಗೆ ರೇವಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ತಿಳಿದುಕೊಂಡು ಪ್ರತಿಕ್ರಿಯಿಸುವೆ ಎಂದು ಹೇಳಿದರು.

ಮಂಡ್ಯ ಅಖಾಡಕ್ಕೆ ಡಿಕೆಶಿ ಎಂಟ್ರಿ

ಸುಮಲತಾ ಅಂಬರೀಶ್ ಜತೆಗೆ ಗುರುತಿಸಿಕೊಂಡಿರುವ ಅತೃಪ್ತ ಕಾಂಗ್ರೆಸ್ಸಿಗರನ್ನು ಕಟ್ಟಿ ಹಾಕಲು ಸಚಿವ ಡಿ ಕೆ ಶಿವಕುಮಾರ್‌ ಮುಂದಾಗಿದ್ದು, ನಾಳೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ಸಿಗರ ಸಭೆ ಕರೆದಿದ್ದಾರೆ. ಔತಣ ಕೂಟದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಸುಮಲತಾಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರೂ ಕೆಲ ಕಾಂಗ್ರೆಸ್ಸಿಗರು ಅವರ ಜತೆಗೆ ಗುರುತಿಸಿಕೊಂಡಿದ್ದು, ಅತೃಪ್ತ ನಾಯಕರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ಮನವೊಲಿಕೆಗೆ ಡಿಕೆಶಿ ಕಸರತ್ತು ನಡೆಸಲಿದ್ದಾರೆ.