ಶಿರಸಿ: ಕಳೆದ 15 ದಿನಗಳಿಂದ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡ ಪರಿಣಾಮ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯಿತಿಗೆ ಭೇಟಿ ನೀಡಿ, ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಕುಳವೆ ಭಾಗದ ಕೆಂಚಗದ್ದೆ, ಬರೂರು, ಸೊಸೈಟಿ ಕಾಲನಿ, ಕುಳವೆ ಗ್ರಾಮ, ಬಾಳೆತೋಟ ಹೀಗೆ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿ ಕತ್ತಲಲ್ಲಿ ಕಳೆಯುವ ಸ್ಥಿತಿ ಎದುರಾಗಿದೆ. ಅದರಲ್ಲೂ ಗುಡ್ಡದಮನೆ ಟಿಸಿಯು ಕಳೆದ 13 ದಿನಗಳಿಂದ ಸರಿಪಡಿಸದ ಪರಿಣಾಮ ಟಿಸಿ ನಂಬಿಕೊಂಡಿದ್ದ ಗ್ರಾಮಗಳಲ್ಲಿ ತೀವ್ರ ತೊಂದರೆಯುಂಟಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆಸ್ಕಾಂಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಸ್ವತಃ ಎಇಇ ನಾಗರಾಜ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಒಂದು ವಾರದೊಳಗೆ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ರವಿ ಹೆಗಡೆ ಕೆಂಚಗದ್ದೆ ಮಾತನಾಡಿ, ಸ್ಥಳೀಯ ಲೈನ್ವುನ್ಗಳು ಗ್ರಾಹಕರ ಕರೆಗೆ ಸ್ಪಂದಿಸುವುದಿಲ್ಲ. ಮೇಲಿನವರನ್ನೇ ಕೇಳಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಎಇಇ ಪಾಟೀಲ, ಈ ಬಗ್ಗೆ ಲೈನ್ವುನ್ಗೆ ತಿಳಿಹೇಳಿ, ಅವರ ಜತೆಗೆ ಹೊರಗುತ್ತಿಗೆ ನೌಕರರೊಬ್ಬರನ್ನು ನೀಡಿ ಉತ್ತಮ ಸೇವೆ ನೀಡುವುದಾಗಿ ಹೇಳಿದರು.
ವಿನಯ ಹೆಗಡೆ ಕೆಂಚಗದ್ದೆ ಮಾತನಾಡಿ, ಕೆಂಚಗದ್ದೆಯ ಟಿಸಿ 400 ವೋಲ್ಟ್ ಬರುತ್ತಿದ್ದು, ಇದರಿಂದ ಇಲೆಕ್ಟಾ›ನಿಕ್ ವಸ್ತುಗಳು ಸುಟ್ಟು ಹೋಗುತ್ತಿವೆ ಎಂದು ದೂರಿದರು. ಎಚ್ಟಿ ಲೈನ್ಗಳ ಮೇಲೆ ಮರಗಳು ಬಿದ್ದುಕೊಂಡಿದೆ. ಬೇಸಿಗೆಯಲ್ಲಿ ಮೆಂಟೆನೆನ್ಸ್ ಮಾಡಲಿಲ್ಲ ಎಂದು ಸಾರ್ವಜನಿಕರು ಎಇಇ ಗಮನಕ್ಕೆ ತಂದರು.
ಲೈನ್ವುನ್ ಹಾಗೂ ಸೆಕ್ಷನ್ ಆಫೀಸರ್ ಸರಿಯಾದ ಸಹಕಾರ ನೀಡುತ್ತಿಲ್ಲ. ಸೆಕ್ಷನ್ ಆಫೀಸರ್ ಕನಿಷ್ಠ ಫೋನ್ ಸಹ ರೀಸಿವ್ ಮಾಡಲ್ಲ ಎಂದು ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ ಅಸಮಧಾನ ವ್ಯಕ್ತಪಡಿಸಿದರು. ಅಂತಹ ಅಧಿಕಾರಿಗಳಿಗೆ ನೊಟೀಸ್ ಮಾಡಿ ಎಂದು ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಹೇಳಿದರು. ಈ ವೇಳೆ ಗ್ರಾಮದ ವಿದ್ಯುತ್ ಸಮಸ್ಯೆ ಬಗೆಹರಿಸುವ ಜತೆಗೆ ಅಧಿಕಾರಿಗಳಿಗೆ ಸ್ಪಂದನೆ ಮಾಡುವಂತೆ ತಿಳಿ ಹೇಳುವುದಾಗಿ ಎಇಇ ಹೇಳಿದರು.
ಗ್ರಾಪಂ ಸದಸ್ಯರಾದ ಸಂದೇಶ ಭಟ್ ಬೆಳಖಂಡ, ವಿನಯ ಭಟ್ ಕುಳವೆ, ಮಾಜಿ ಉಪಾಧ್ಯಕ್ಷ ಭರತ್ ಹೆಗಡೆ ಕೆಂಚಗದ್ದೆ, ಗ್ರಾಮಸ್ಥರಾದ ರಾಘವೇಂದ್ರ ಸ್ವಾದಿ, ನಾಗೇಶ ಹೆಗಡೆ ಕೆಂಚಗದ್ದೆ, ಉಲ್ಲಾಸ ರಾಯ್ಕರ್, ಮಹೇಶ ರಾಯ್ಕರ್ ಇತರರು ಇದ್ದರು.