More

    ಮೀನು ಕೃಷಿಗಿದೆ ವಿಪುಲ ಅವಕಾಶ; ಇಂದು ರಾಷ್ಟ್ರೀಯ ಮೀನು ಕೃಷಿಕರ ದಿನ

    ಭಾರತ ಸರ್ಕಾರದ ಆದೇಶಾನ್ವಯ ಪ್ರತಿ ವರ್ಷ ಜುಲೈ 10ರಂದು ದೇಶಾದ್ಯಂತ ಮೀನುಗಾರಿಕೆಗೆ ಸಂಬಂಧಪಟ್ಟ ಸಂಘ-ಸಂಸ್ಥೆಗಳು ‘ರಾಷ್ಟ್ರೀಯ ಮೀನು ಕೃಷಿಕರ ದಿನ’ವನ್ನು ಆಚರಿಸುತ್ತವೆ. ಡಾ.ಹೀರಾಲಾಲ್ ಚೌಧುರಿ ಮತ್ತು ಡಾ.ಕೆ.ಎಚ್.ಆಲಿಕುನ್ನಿ ಎಂಬಿಬ್ಬರು ವಿಜ್ಞಾನಿಗಳು ಐವತ್ತರ ದಶಕದ ಅಂತ್ಯದಲ್ಲಿ ಮೀನಿನ ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಿದ ಹಾಮೋನನ್ನು ಬಳಸಿ ಕೃತಕ ವಿಧಾನದಿಂದ ಗೆಂಡೆ ಮೀನುಗಳನ್ನು ವಂಶಾಭಿವೃದ್ಧಿ ಮಾಡಿಸಿದ ನೆನಪಿಗಾಗಿ ಮೀನು ಕೃಷಿಕರ ದಿನ ಆಚರಿಸಲಾಗುತ್ತಿದೆ. ಭಾರತೀಯ ಮೀನುಗಾರಿಕಾ ರಂಗದಲ್ಲಿ ಹೊಸಕ್ರಾಂತಿಗೆ ನಾಂದಿ ಹಾಡಿದ ಮಹಾನ್ ವಿಜ್ಞಾನಿಗಳನ್ನು ನೆನೆಯುವ ಜತೆಗೆ, ಈ ಕಸುಬಿನಲ್ಲಿ ಮುಂದೆ ಸಾಗಬೇಕಾದ ವೈಜ್ಞಾನಿಕ ದಿಕ್ಕು-ದೆಸೆಗಳನ್ನು ರ್ಚಚಿಸಲು ಅವಕಾಶವನ್ನು ಈ ದಿನಾಚರಣೆ ಒದಗಿಸುತ್ತದೆ.

    | ಡಾ.ಶಿವಕುಮಾರ್ ಮಗದ 
    ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಜನಸಂಖ್ಯೆಗೆ, ಸಸಾರಜನಕದ ಕೊರತೆಯನ್ನು ಮೀನುಗಾರಿಕೆ ಕ್ಷೇತ್ರ ಮಾತ್ರ ನೀಗಿಸಬಲ್ಲದು. ಜಾಗತಿಕ ಹಸಿವು ಮತ್ತು ಅಪೌಷ್ಟಿಕತೆ ನೀಗಿಸುವಲ್ಲಿ ಮೀನುಗಾರಿಕೆ ಕ್ಷೇತ್ರದ ಪಾಲು ಗಮನಾರ್ಹ. ಜಾಗತಿಕವಾಗಿ, ಮೀನುಗಾರಿಕೆ ಕ್ಷೇತ್ರ 540 ಮಿಲಿಯನ್ ಅಂದರೆ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ.8 ಜನರಿಗೆ ಜೀವನಾಧಾರವಾಗಿದೆ (ವಿಶ್ವ ಆಹಾರ ಸಂಸ್ಥೆ ಮಾಧ್ಯಮ ಕೇಂದ್ರ, ಜನವರಿ-2022). ಆದರೆ, ಶೇ.80ಕ್ಕೂ ಹೆಚ್ಚು ಮೀನಿನ ಸಂತತಿಗಳು ವಿನಾಶದ ಅಂಚಿನಲ್ಲಿವೆ. ಕಡಲತೀರವುಳ್ಳ 9 ರಾಜ್ಯಗಳನ್ನು ಒಳಗೊಂಡ ಭಾರತವೂ ಮೀನುಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ದೇಶ. ಪ್ರಪಂಚದಲ್ಲಿ ಮೀನಿನ ಒಟ್ಟು ಉತ್ಪಾದನೆ 178 ಮಿಲಿಯನ್ ಟನ್​ಗಳಷ್ಟಿದೆ. ಭಾರತ 16.24 ಮಿ.ಟನ್(ಸಾಗರದಿಂದ 3.7 ಮತ್ತು ಸಿಹಿನೀರು ಮೀನುಕೃಷಿಯಿಂದ 12.54 ಮಿ.ಟ.) ಮೀನನ್ನು ಉತ್ಪಾದಿಸುತ್ತಿದ್ದು, ಜಾಗತಿಕವಾಗಿ ಮೀನುಗಾರಿಕೆಯಲ್ಲಿ ಮೂರನೇ ಸ್ಥಾನ ಮತ್ತು ಮೀನು ಕೃಷಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಮೀನು ಕೃಷಿಯ ಕ್ಷೇತ್ರ ವಾರ್ಷಿಕ ಶೇ.6ರಿಂದ 8ರಷ್ಟು ಬೆಳೆಯುತ್ತಿದೆ. ಮೀನು ಮತ್ತು ಮೀನಿನ ಉತ್ಪನ್ನಗಳನ್ನು 12.57 ಲಕ್ಷ ಟನ್​ನಷ್ಟು ಸುಮಾರು 75 ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದು, 58 ಸಾವಿರ ಕೋಟಿ ರೂ. ವಿದೇಶಿ ವಿನಿಮಯದಿಂದ ಗಳಿಸುತ್ತಿದೆ. ಇದು ಕೃಷಿ ಉತ್ಪನ್ನಗಳ ರಫ್ತಿನ ಶೇ.20 ಮತ್ತು ದೇಶದ ಒಟ್ಟು ರಫ್ತಿನ ಶೇ.10 ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಓರ್ವನಿಗೆ ಮೀನಿನ ಲಭ್ಯತೆ 23 ಕೆ.ಜಿ.ಯಷ್ಟಿರಬೇಕು. ಆದರೆ ಭಾರತದ ವಾರ್ಷಿಕ ಮೀನಿನ ಲಭ್ಯತೆ 12.5 ಕೆ.ಜಿ.

    2200 ಮೀನಿನ ತಳಿ: ಪ್ರಪಂಚದ ಮತ್ಸ್ಯವೈವಿಧ್ಯದ ಶೇ.10 ಅನ್ನು ಭಾರತ ಹೊಂದಿದೆ. ಉಪ್ಪುನೀರಿನ 1440, ಚೌಳುಪ್ಪು ನೀರಿನ 143, ಸಿಹಿನೀರಿನ 544 ಮತ್ತು ಚಳಿಪ್ರದೇಶದ 73 ತಳಿಗಳೂ ಸೇರಿ 2200 ತಳಿಗಳನ್ನು ಹೊಂದಿದೆ. 30 ಮಿಲಿಯನ್ ಜನರಿಗೆ ಜೀವನಾಧಾರವಾಗಿರುವ ಈ ಕ್ಷೇತ್ರದಿಂದ ವಾರ್ಷಿಕ 33,534 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದು ದೇಶದ ಒಟ್ಟು ಆಂತರಿಕ ಉತ್ಪಾದಕತೆಯ ಶೇ.1.07 ಮತ್ತು ಕೃಷಿ ಕ್ಷೇತ್ರದ ಒಟ್ಟು ಆಂತರಿಕ ಉತ್ಪಾದಕತೆಯ ಶೇ.5.4 ಇದೆ.

    ನೀಲಿಕ್ರಾಂತಿ ಅವಶ್ಯ: ರಾಜ್ಯದಲ್ಲಿಯೂ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ನಮ್ಮಲ್ಲಿ 300 ಕಿ.ಮೀ. ಕರಾವಳಿ ತೀರ, 9000 ಕಿ.ಮೀ.ಉದ್ದದಷ್ಟು ನದಿಗಳು 82 ಜಲಾಶಯಗಳು (ವಿಸ್ತೀರ್ಣ: 2.67 ಲ.ಹೆ.), 3399 ದೊಡ್ಡ ಕೆರೆಗಳು (ವಿಸ್ತೀರ್ಣ: 1.71 ಲ.ಹೆ.), 22,624 ಸಣ್ಣಕೆರೆಗಳು (ವಿಸ್ತೀರ್ಣ: 1.20 ಲ.ಹೆ.), 33,500ಕ್ಕೂ ಅಧಿಕ ಅಸಾಂಪ್ರದಾಯಿಕ ನೀರು ಸಂಗ್ರಹಣಾ ತೊಟ್ಟಿಗಳಿವೆ. ಪ್ರಸ್ತುತ 0.5 ಮಿ.ಟನ್ ಸಿಹಿನೀರಿನಿಂದ ಮತ್ತು 0.72 ಮಿ.ಟನ್ ಕಡಲ ಮೀನುಗಾರಿಕೆಯಿಂದ ಉತ್ಪಾದನೆ ಆಗುತ್ತಿದೆ. ಆಂಧ್ರ ಪ್ರದೇಶ, ಹರ್ಯಾಣ, ಪಂಜಾಬ್, ಅಸ್ಸಾಂ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಆದ ನೀಲಿಕ್ರಾಂತಿ ನಮ್ಮ ರಾಜ್ಯದಲ್ಲೂ ಆಗಬೇಕಿದೆ. ಪ್ರಸ್ತುತ ರಾಜ್ಯದಲ್ಲಿ 1.22 ಮಿ.ಟನ್ ಮೀನಿನ ಉತ್ಪಾದನೆಯಿದ್ದು ತಲಾವಾರು ಬಳಕೆ ವರ್ಷಕ್ಕೆ 8.5 ಕೆ.ಜಿ. ಇದೆ. ಭಾರತದ ಸರಾಸರಿ (12.5 ಕೆ.ಜಿ)ಗಿಂತ ಕಡಿಮೆಯಿದೆ.

    ಎಲ್ಲ್ಲೆಡೆ ಮೀನು ಕೃಷಿ: ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಮೀನುಕೃಷಿ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ರಾಜ್ಯದಲ್ಲಿ 1 ಮಿಲಿಯನ್ ಹೆಕ್ಟೇರ್ ಚೌಳು ಮತ್ತು ಕ್ಷಾರಮಣ್ಣಿನ ಪ್ರದೇಶವಿದೆ. ಇವುಗಳನ್ನು ಮೀನುಕೃಷಿಗೆ ಬಳಸಿಕೊಳ್ಳಬೇಕು. ತರಕಾರಿ ಮತ್ತು ಕಾಫಿ ಬೆಳೆಗಾರರು ಅಗತ್ಯವಿರುವಾಗ ನೀರು ಹಾಯಿಸಲು ದೊಡ್ಡ ಕೃಷಿಹೊಂಡ ಮಾಡಿರುತ್ತಾರೆ. ಈ ರೀತಿಯ ಕೊಳಗಳು ರಾಜ್ಯದಲ್ಲಿ ಸಾವಿರಾರು ಇವೆ. ಇವುಗಳಲ್ಲಿ ಸೂಕ್ತ ಮೀನು ತಳಿಗಳನ್ನು ಬಿತ್ತನೆ ಮಾಡಬಹುದು. ಯಾವುದೇ ಕಾರಣಕ್ಕೂ ಆಫ್ರಿಕನ್ ಕ್ಯಾಟ್​ಫಿಶ್ ಬೆಳೆಯಬಾರದು. ಅದು ಕಾನೂನು ಬಾಹಿರ.

    ಮೀನುಕೃಷಿಗೆ ಬೇಕಿರುವುದು ಸೂಕ್ತ ತಂತ್ರಜ್ಞಾನಗಳ ಪರಿಚಯ, ಮಾರುಕಟ್ಟೆ ಇತಿಮಿತಿ, ವೈಯಕ್ತಿಕ ಶಕ್ತಿ, ಆರ್ಥಿಕ ನೆರವು ಇತ್ಯಾದಿ. ವೈಯಕ್ತಿಕ ಶಕ್ತಿಯಿಂದ ಮೀನು ಕೃಷಿಯಲ್ಲಿ ಯಶಸ್ಸು ಕಂಡ ಅನೇಕರಿದ್ದಾರೆ. ವಿವಿಗಳು, ಇತರ ಸಂಘ- ಸಂಸ್ಥೆಗಳು ಒಂದು ಮಟ್ಟದವರೆಗೆ ನೆರವಾಗಬಹುದು. ಆದರೆ ಯಶಸ್ಸಿಗೆ ಬೇಕಾದ ಇತರ ವೈಯಕ್ತಿಕ ಗುಣ ಬೆಳೆಸಿಕೊಳ್ಳದೆ, ಈ ಉದ್ಯಮದಲ್ಲಿ ಪಾಲ್ಗೊಳ್ಳಬಾರದು.

    ಅಡ್ಡದಾರಿಗಳಿಂದ ಬಾಧೆ: ಅವ್ಯವಸ್ಥಿತ ನಿರ್ವಹಣೆಯಿಂದ ಮತ್ಸ್ಯಸಂಪನ್ಮೂಲವನ್ನು ನಾವು ಹಾಳುಗೆಡವಿದ್ದೇವೆ. ಇದರ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ದೋಣಿಗಳ ಸಂಖ್ಯೆ, ಇಳಿಮುಖವಾಗುತ್ತಿರುವ ಉತ್ಪಾದನೆ, ಸಣ್ಣಕಣ್ಣಿನ ಬಲೆಯ ಬಳಕೆ, ಕೆಲವೆಡೆ ಮಳೆಗಾಲದ ಮೀನುಗಾರಿಕೆ, ನಿಷೇಧಿತ ಪದ್ಧತಿಗಳಿಂದ ಮೀನುಗಾರಿಕೆ, ವಿದೇಶಿ ಮತ್ಸ್ಯಳ್ಳರ ಹಾವಳಿ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಕಡಲ ಮೀನುಗಾರಿಕೆಯನ್ನು ಬಾಧಿಸಿದರೆ, ಮೀನುಕೃಷಿಯಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ, ಉತ್ತಮ ಮೀನು ಮರಿಗಳ ಕೊರತೆ, ಮಧ್ಯವರ್ತಿಗಳ ಕಾಟ, ಸಾಂಧ್ರ ಕೃಷಿಯಲ್ಲಿ ಹೊಸ ರೋಗಗಳು, ಪಾಕು, ತಿಲಾಪಿಯ ಮತ್ತು ಆಫ್ರಿಕನ್ ಕ್ಯಾಟ್​ಫಿಶ್ ಕೃಷಿಕರು ಸಾಗುತ್ತಿರುವ ಅಡ್ಡದಾರಿಗಳು ಬಾಧಿಸುತ್ತಿವೆ. ಇತ್ತೀಚೆಗೆ ಸಿಗಡಿ ಕೃಷಿ ಮತ್ತು ಪಂಜರ ಕೃಷಿಗಳಲ್ಲಿ ಹಲವಾರು ಉದ್ಯಮಿಗಳು, ರೈತರು ಪಾಲ್ಗೊಳ್ಳುತ್ತಿದ್ದರೂ, ಈ ಉದ್ಯಮಗಳು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಾಗೆಂದು ಯಾರೂ ವಿಮುಖರಾಗಬೇಕಿಲ್ಲ. ವೈಜ್ಞಾನಿಕ ವಿಚಾರ, ಆರ್ಥಿಕತೆಯ ಅರಿವು, ವ್ಯವಹಾರಿಕ ಜಾಣ್ಮೆಯಿದ್ದರೆ ಗೆಲುವು ಖಚಿತ.

    ಕರಾವಳಿ ಜಿಲ್ಲೆಗಳಲ್ಲಿ ತಲಾವಾರು ಹಿಡುವಳಿ ಜಮೀನು ಕಡಿಮೆ ಇರುವುದರಿಂದ ಮತ್ತು ಸಿಹಿನೀರಿನ ಮೀನುಗಳಿಗೆ ಬೇಡಿಕೆ ಇಲ್ಲದ ಕಾರಣ, ಹೆಚ್ಚು ರೈತರು ಸಿಹಿನೀರಿನ ಮೀನು ಕೃಷಿಗೆ ಆಸಕ್ತಿ ವಹಿಸುತ್ತಿಲ್ಲ. ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳ ಪ್ರಯತ್ನಗಳಿಂದ ಇತ್ತೀಚೆಗೆ ಆಸಕ್ತಿ ಹೆಚ್ಚುತ್ತಿದೆ. ರೈತರು ಕೃಷಿ ಹೊಂಡ, ಇಟ್ಟಿಗೆ ತೆಗೆದ ಗುಂಡಿ, ಹಡಿಲು ಜಮೀನು, ಕಿಂಡಿ ಅಣೆಕಟ್ಟುಗಳಲ್ಲಿ ಮತ್ತು ಬಾವಿಗಳಲ್ಲಿ ಮನೆ ಬಳಕೆಗೆ ಮೀನನ್ನು ಬೆಳೆದುಕೊಳ್ಳಬಹುದು. ಹೆಚ್ಚು ಉತ್ಪಾದನೆ ಬಂದರೆ ಸ್ಥಳೀಯವಾಗಿ ಮಾರಬಹುದು. ಕಳೆದ ಮೂರು ವರ್ಷಗಳಿಂದ ಪ್ರಧಾನಮಂತ್ರಿ ಮತ್ಸ್ಯಂಪದ ಯೋಜನೆ ಜಾರಿಯಲ್ಲಿದ್ದು 50ಕ್ಕೂ ಹೆಚ್ಚು ವಿವಿಧ ಯೋಜನೆಗಳು ಮೀನುಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ. ಆಸಕ್ತ ರೈತರು ಸ್ಥಳೀಯ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂರ್ಪಸಬಹುದು.

    ಮತ್ಸ್ಯ ಸಂಪತ್ತು ರಕ್ಷಣೆ

    ಭಾರತದ ಮೀನುಗಾರಿಕೆ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಇತರ ಸಂಬಂಧಿಸಿದ ಜನರು ಸಂಘಟಿತರಾಗಿ ಸ್ಪಷ್ಟ ಗುರಿಯೊಂದಿಗೆ ಯೋಜನಾಬದ್ಧವಾಗಿ ದುಡಿದು ಮತ್ಸ್ಯಂಪತ್ತನ್ನು ಸಂರಕ್ಷಿಸುತ್ತಾ ಪ್ರಗತಿ ಸಾಧಿಸಬೇಕು. ಈ ಮೀನುಕೃಷಿಕರ ದಿನಾಚರಣೆ ಸುಸ್ಥಿರ ಮೀನುಕೃಷಿಯನ್ನು ಅಭಿವೃದ್ಧಿಪಡಿಸುವತ್ತ ನಮ್ಮಲ್ಲಿ ಹೊಸ ಆಶಯಗಳನ್ನು ಸೃಷ್ಟಿಸಲಿ. ಆಶಯಗಳು ಕನಸಿನಂತೆ ಕಾಡಲಿ. ಕನಸು ನನಸಾಗಲಿ. ಜಲಚರಗಳ ವ್ಯವಹಾರದಲ್ಲಿ ಯಶಸ್ಸು ಆಸಕ್ತಿ ಮತ್ತು ನಿರಂತರ ಕಲಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಲಾಭ ಮಾಡಿಕೊಳ್ಳುವ ಒಂದೇ ಉದ್ದೇಶದಿಂದ ಈ ಉದ್ಯಮದಲ್ಲಿ ಪಾಲ್ಗೊಳ್ಳಬಾರದು. ಜೀವ ಸಂಕುಲವನ್ನು ಪ್ರೀತಿಸಿ, ಪ್ರಕೃತಿಯನ್ನು ಗೌರವಿಸುವುದಾದರೆ, ಈ ಉದ್ಯಮಕ್ಕೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್ ವ್ಯಾಪ್ತಿಗೆ ಬರುವ ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೂ ಜನರ ಜತೆಗೆ ಇರುತ್ತದೆ.

    (ಲೇಖಕರು ಪ್ರಾಧ್ಯಾಪಕರು, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು)

    ಒಂದೇ ಕುಟುಂಬದ ಆರು ಮಂದಿ ಸಾವು; ತಿರುಪತಿ ದೇವಸ್ಥಾನದಿಂದ ಮರಳುವಾಗ ಅಪಘಾತ!

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts