ಕುಲಕಸುಬು ನಿರ್ವಹಣೆಗೆ ಯಾವುದೇ ಕೀಳರಿಮೆ ಬೇಡ

ಕೊಳ್ಳೇಗಾಲ: ಸವಿತಾ ಸಮಾಜದ ಜನರು ಹಡಪದ ಅಪ್ಪಣ್ಣ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಲತಾ ರಾಜಣ್ಣ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸವಿತಾ ಸಮಾಜದವರು ತಮ್ಮ ಕುಲ ಕಸುಬನ್ನು ನಿರ್ವಹಿಸುವಲ್ಲಿ ಯಾವುದೇ ಕೀಳರಿಮೆ ಬೇಡ. ಯಾವ ವೃತ್ತಿಯೂ ಕೀಳಲ್ಲ, ಯಾವುದೂ ಮೇಲಲ್ಲ. ಜೀವನ ನಡೆಸಲು ಮಾಡುವ ಕಾನೂನುಬದ್ಧವಾದ ವೃತ್ತಿಗಳಲ್ಲೆವೂ ಶ್ರೇಷ್ಠ. ಸವಿತಾ ಸಮಾಜದವರು ಹೆಚ್ಚು ವಿದ್ಯಾವಂತರಾಗಬೇಕು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದು ಸಮಾಜದ ಮುಖ್ಯವಾಹಿಗೆ ಬರಬೇಕು ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ ಶಿವಣ್ಣ ಇಂದ್ವಾಡಿ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಹಡಪದ ಅಪ್ಪಣ್ಣ ಅವರು ತಮ್ಮ ಕಾಯಕದ ಜತೆಗೆ 200 ವಚನಗಳನ್ನು ಬರೆದಿದ್ದರೆ, ಅವರ ಪತ್ನಿ ಲಿಂಗಮ್ಮ 116 ವಚನಗಳನ್ನು ಬರೆದಿದ್ದು, ಶೇಷ್ಠ ವಚನಕಾರೆಂಬ ಬಿರುದು ಪಡೆದಿದ್ದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಲ್.ನಾಗರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಮಾತನಾಡಿದರು. ತಹಸೀಲ್ದಾರ್ ಕೆ.ಕುನಾಲ್, ತಾಪಂ ಇಒ ಉಮೇಶ್, ಬಿಇಒ ಚಂದ್ರಪಾಟೀಲ್, ಸವಿತಾ ಸಮಾಜದ ಅಧ್ಯಕ್ಷ ಸೋಮಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *