ಕಡುಬೇಸಿಗೆಯಲ್ಲೂ ಸಲಿಲಧಾರೆ!

>

ಆರ್.ಬಿ. ಜಗದೀಶ್, ಕಾರ್ಕಳ
ಐತಿಹಾಸಿಕ ಆನೆಕೆರೆ ಮತ್ತು ಸಿಗಡಿಕೆರೆಯಲ್ಲಿ 2016ನೇ ಇಸವಿಯಲ್ಲಿ ನಿರ್ಮಿಸಿದ ಭಾರಿ ಗಾತ್ರದ ಬಾವಿಗಳಲ್ಲಿ ಕಡುಬೇಸಿಗೆಯಲ್ಲೂ ಸಮೃದ್ಧ ನೀರು ಗೋಚರವಾಗಿದೆ. ಇದರಿಂದ ಕಾಳಿಕಾಂಬಾ ನಗರ, ದಾನಶಾಲೆ, ಆನಂದ ನಗರ, ಕರಿಯ ಕಲ್ಲು, ನಾರಾಯಣಗುರು ನಗರ, ಬೈಪಾಸ್, ಬಾಲಾಜಿ ಶಿಬಿರ, ದುಗ್ಗಬೆಟ್ಟು ಪ್ರದೇಶಗಳಲ್ಲಿರುವ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆಗೆ ತತ್ಕಾಲಕ್ಕೆ ಮುಕ್ತಿ ದೊರೆತಿದೆ.

ಬಹುವರ್ಷಗಳ ಬೇಡಿಕೆಯಂತೆ ಸಿಗಡಿಕೆರೆಯಲ್ಲಿ ಬಾವಿ ನಿರ್ಮಾಣಕ್ಕೆ 2016ರಲ್ಲಿ ಪುರಸಭಾ ಆಡಳಿತ ವರ್ಗ ಅನುಮೋದನೆ ನೀಡಿತ್ತು. ಎಸ್‌ಎಫ್‌ಸಿ, 10ನೇ ಹಣಕಾಸು ಯೋಜನೆ, ಟಾಸ್ಕ್‌ಫೋರ್ಸ್ ಯೋಜನೆಗಳ ಒಟ್ಟು 12 ಲಕ್ಷ ರೂ. ಅನುದಾನದಲ್ಲಿ ಈ ಬಾವಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿತ್ತು. ಕೇವಲ ಎಂಟು ಅಡಿ ಆಳದಲ್ಲೇ ನಿರೀಕ್ಷೆ ಮೀರಿ ನೀರು ದೊರೆತಿರುವುದು ನಾಗರಿಕರಲ್ಲಿ ಸಂತಸ ಮೂಡಿಸಿತ್ತು. ಇದೇ ಬಾವಿಯಿಂದ ಪ್ರತಿದಿನ ಒಂದೂವರೆ ಲಕ್ಷ ಲೀಟರ್‌ನಷ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ನೆರೆಯಿಂದೇನಾದರೂ ಅಪಾಯ ಎದುರಾದರೆ ಬಾವಿಗೆ ಯಾವುದೇ ಅನಾಹುತ ಆಗದಂಥ ರೀತಿಯಲ್ಲಿ ಬಾವಿ ನಿರ್ಮಾಣವಾಗಿದೆ. ವರ್ತುಲ 27 ಅಡಿಗೆ ವಿಸ್ತರಿಸಲಾಗಿದೆ. ನೆಲದಿಂದ 10 ಅಡಿಯಷ್ಟು ಎತ್ತರಿಸಿ ಬಾವಿ ನಿರ್ಮಿಸಲಾಗಿದೆ.

ಆನೆಕೆರೆ ಪರಿಸರ ಬಾವಿಯಲ್ಲೂ ಸಮೃದ್ಧ ಜಲ
14ನೇ ಹಣಕಾಸು ಯೋಜನೆಯಡಿ ಆನೆಕೆರೆ ಪರಿಸರದಲ್ಲಿ ಬಾವಿ ನಿರ್ಮಾಣ ಮಾಡಲಾಗಿತ್ತು. ಸಿಗಡಿಕೆರೆಯಲ್ಲಿ ಬಾವಿ ತೋಡುವ ಮುನ್ನ ಅದೇ ವರ್ಷ ಪುರಸಭೆ ಆನೆಕರೆಯಲ್ಲಿ ಬಾವಿ ನಿರ್ಮಿಸಿದೆ. ಎಂಟು ಅಡಿ ಅಳದಲ್ಲಿ ಒಂದಿಷ್ಟು ನೀರು ದೊರೆತಿದ್ದರೂ ಅದರ ತಳಭಾಗದಲ್ಲಿ ಕರಿಬಂಡೆ ಕಲ್ಲು ಚಾಚಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ದೊರಕದೆ ಒಂದಿಷ್ಟು ವಿಘ್ನ ಎದುರಾಗಿತ್ತು. ಆ ಸಂದರ್ಭ ಕರಿಬಂಡೆ ಕಲ್ಲು ಛಿದ್ರಗೊಳಿಸಿದ ಬಳಿಕವಷ್ಟೇ ಅಲ್ಲಿ ಸಂಪದ್ಭರಿತ ನೀರು ದೊರಕುವಲ್ಲಿ ಕಾರಣವಾಯಿತು. ನಾರಾಯಣಗುರು ನಗರ, ಬೈಪಾಸ್, ಬಾಲಾಜಿ ಶಿಬಿರ, ದುಗ್ಗಬೆಟ್ಟು ಪ್ರದೇಶಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಕೆರೆ ಉಳಿವಿಗೆ ಶಿವರಾಮ ಕಾರಂತ ಕೊಡುಗೆ
ಐತಿಹಾಸಿಕ ಆನೆಕೆರೆ ಪಕ್ಕದಲ್ಲಿ ಹಾದುಹೋಗಿರುವ ರಸ್ತೆಯ ಮತ್ತೊಂದು ಅಂಚಿನಲ್ಲಿ ಸಿಗಡಿಕೆರೆ ಇದೆ. ಎರಡು ಕೆರೆಗಳಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಗೊಳ್ಳುತ್ತಿರುವುದರಿಂದ ಇದರ ಪರಿಸರದಲ್ಲಿ ಇರುವ ಬಾವಿಗಳಲ್ಲಿ ನೀರು ಆವಿಯಾಗುತ್ತಿಲ್ಲ. ಸಿಗಡಿಕೆರೆಗೆ ಮಣ್ಣು ಮುಚ್ಚಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಹಿಂದೊಮ್ಮೆ ಜಿಲ್ಲಾಡಳಿತದ ಮುಂದಿತ್ತು. ಮಾಹಿತಿ ಹೊರಬೀಳುತ್ತಿದ್ದಂತೆ ಪರಿಸರ ಪ್ರೇಮಿಗಳು ಜತೆಗೂಡಿ ಸಿಗಡಿಕೆರೆ ಉಳಿಸುವ ಹೋರಾಟ ನಡೆಸಿದ್ದರು. ಸಾಹಿತಿ, ಪರಿಸರ ಪ್ರೇಮಿ ಶಿವರಾಮ ಕಾರಂತರು ಚಾಲನೆ ನೀಡಿದ ಹೋರಾಟ ಯಶಸ್ವಿಗೊಂಡಿತು. ಸಿಗಡಿಕೆರೆ ಉಳಿದ ಪರಿಣಾಮ ಪ್ರಸ್ತುತ ನೀರಿನ ಸಮಸ್ಯೆ ನೀಗುವಂತಾಗಿದೆ.

ಆನೆಗಳು ಈಜಾಡುತ್ತಿದ್ದ ಕೆರೆ
ಕಾರ್ಕಳವನ್ನಾಳಿದ ಜೈನ ಅರಸರ ಕಾಲಘಟ್ಟದಲ್ಲಿ ಭದ್ರತೆ ದೃಷ್ಟಿಯಿಂದ ಕಾರ್ಕಳದಲ್ಲಿ ಕೋಟೆ ನಿರ್ಮಿಸಲಾಗಿತ್ತು. ಕೋಟೆ ರಕ್ಷಣೆಗಾಗಿ ಅದರ ವರ್ತುಲದಲ್ಲಿ ಕಂದಕ ತೆರೆದಿದ್ದರು. ಅದರಲ್ಲಿ ನೀರು ನಿಲ್ಲಿಸುವ ಕಾರ್ಯ ನಡೆದಿತ್ತು. ಕಂದಕಕ್ಕೆ ಆನೆಕೆರೆ ಸಂಪರ್ಕ ಇತ್ತು. ಬೃಹತ್ ಆಕಾರದ ಕೆರೆಯಲ್ಲಿ ಆನೆಗಳು ಈಜಾಡುತ್ತಿದ್ದವು. ಹಾಗಾಗಿ ಈ ಕೆರೆಗೆ ಆನೆಕೆರೆ ಎಂಬ ಹೆಸರು ಬಂತು.