ಹೋಟೆಲ್‌ಗಳಿಗೂ ನೀರಿನ ಬಿಸಿ

<<ದಿನಕ್ಕೆ ನಾಲ್ಕೈದು ಟ್ಯಾಂಕರ್ ನೀರಿಗೆ ಮೊರೆ * ಉಲ್ಬಣಿಸಲಿದೆ ಸಮಸ್ಯೆ>>>

ಅವಿನ್ ಶೆಟ್ಟಿ ಉಡುಪಿ
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹೋಟೆಲ್ ಉದ್ಯಮಕ್ಕ್ಕೂ ತಟ್ಟಿದೆ.
ನಗರದ ಹೋಟೆಲ್, ಲಾಡ್ಜ್, ರೆಸ್ಟೋರೆಂಟ್‌ಗಳಲ್ಲಿ ಸಮಸ್ಯೆ ಗಂಭೀರವಾಗಿದ್ದು, ನಿತ್ಯವೂ ಟ್ಯಾಂಕರ್ ಮೂಲಕವೇ ನೀರು ತರಿಸಬೇಕಾದ ಸ್ಥಿತಿ ಎದುರಾಗಿದೆ.

ಶಿಕ್ಷಣ, ಆರೋಗ್ಯ, ಧಾರ್ಮಿಕ ಸ್ಥಳ, ಪ್ರವಾಸೋದ್ಯಮವಾಗಿ ಮುಂಚೂಣಿಯಲ್ಲಿರುವ ಉಡುಪಿಗೆ ಹೋಟೆಲ್ ಉದ್ಯಮ ಆರ್ಥಿಕ ನೆಲೆ. ನಗರದಲ್ಲಿ ಸಣ್ಣ ಕ್ಯಾಂಟೀನ್, ರೆಸ್ಟೋರೆಂಟ್, ಲಾಡ್ಜ್ ಸೇರಿದಂತೆ ಹೋಟೆಲ್ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಬೆಲೆ ಏರಿಕೆ, ಕಾರ್ಮಿಕರ ಕೊರತೆಯಿಂದ ಕಂಗಾಲಾಗಿರುವ ಹೋಟೆಲ್ ಉದ್ಯಮ ಈಗ ನೀರಿನ ಅಭಾವದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

600ಕ್ಕೂ ಅಧಿಕ ಹೋಟೆಲ್‌ಗಳು: ಉಡುಪಿ ನಗರ, ಮಣಿಪಾಲ, ಮಲ್ಪೆ ಭಾಗದಲ್ಲಿರುವ ಹೋಟೆಲ್‌ಗಳ ಸಂಖ್ಯೆ 600ಕ್ಕ್ಕೂ ಅಧಿಕ. ಸಸ್ಯಾಹಾರಿ, ಮಾಂಸಾಹಾರಿ, ಲಾಡ್ಜಿಂಗ್ ವಿವಿಧ ಬಗೆಯ ಹೋಟೆಲ್ ಉದ್ಯಮ ನಗರದಲ್ಲಿ ತಲೆ ಎತ್ತಿವೆ. ಕಳೆದ ವಾರದಿಂದ ಬಹುತೇಕ ಹೋಟೆಲ್‌ಗಳಲ್ಲಿ ನೀರಿನ ಅಭಾವ ಕಂಡುಬರುತ್ತಿದೆ. ಬಾವಿ, ಬೋರ್‌ವೆಲ್ ಸೇರಿದಂತೆ ಜಲಮೂಲಗಳು ಬರಿದಾಗಿ, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.

ಟ್ಯಾಂಕರ್‌ಗೆ 3 ಸಾವಿರ ರೂ: ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿದ್ದು, 12 ಸಾವಿರ ಲೀ. ಸಾಮರ್ಥ್ಯದ ಒಂದು ಟ್ಯಾಂಕರ್ ನೀರಿಗೆ 2,700 ರೂ.ನಿಂದ 3 ಸಾವಿರ ರೂ. ನೀಡಬೇಕಾಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು. ನಗರಸಭೆ ಮೂರು ದಿನಕ್ಕೊಮ್ಮೆ ಪೂರೈಸುವ ನೀರು ಬಳಕೆಗೆ ಸಾಕಾಗುತ್ತಿಲ್ಲ. ಕೆಲ ಹೋಟೆಲ್‌ಗಳಿಗೆ ಕನಿಷ್ಠ ಅಡುಗೆ ಮಾಡಲು ನೀರಿಲ್ಲ. ಬಹುತೇಕ ಹೋಟೆಲ್, ಲಾಡ್ಜಿಂಗ್, ರೆಸ್ಟೋರೆಂಟ್‌ಗಳು ಸ್ವಂತ ಬೋರ್, ಬಾವಿ ಹೊಂದಿದ್ದರೂ, ಬತ್ತುತ್ತಿರುವ ಕಾರಣ ನೀರು ಸಾಕಾಗುತ್ತಿಲ್ಲ.

ಪ್ರತಿದಿನ ಕೃಷ್ಣ ಮಠಕ್ಕೆ 4 ಟ್ಯಾಂಕರ್ ನೀರು: ಪ್ರತಿ ಬೇಸಿಗೆಯಲ್ಲಿ ಉಡುಪಿ ಕೃಷ್ಣ ಮಠಕ್ಕೂ ನೀರಿನ ಸಮಸ್ಯೆ ಎದುರಾಗುತ್ತದೆ. ಪ್ರಸ್ತುತ ದಿನಕ್ಕೆ 4ರಿಂದ 5 ಟ್ಯಾಂಕರ್ ನೀರು ತರಿಸಲಾಗುತ್ತಿದೆ. ಸಾಮಾನ್ಯವಾಗಿ ಮಠಕ್ಕೆ ಜನವರಿ, ಫೆಬ್ರವರಿ ತಿಂಗಳಲ್ಲಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಈ ವರ್ಷ ಜನವರಿಯಿಂದ ಇಲ್ಲಿವರೆಗೆ ಸುಮಾರು 70 ಟ್ಯಾಂಕರ್ ನೀರನ್ನು ಹೆಚ್ಚುವರಿ ತರಿಸಿಕೊಳ್ಳಲಾಗಿದೆ. ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು, ಭಕ್ತರ ಸಂಖ್ಯೆ ಹೆಚ್ಚಿದ್ದಾಗ ನೀರಿನ ಅಭಾವ ಎದುರಾಗುತ್ತದೆ. ಅನಿವಾರ್ಯವಾಗಿ ಟ್ಯಾಂಕರ್‌ಗೆ ಮೊರೆ ಹೋಗಬೇಕಾಗುತ್ತದೆ. ಮಠಕ್ಕೆ ನಗರಸಭೆಯಿಂದ ಮತ್ತು ಶಿರೂರು ಮಠದ ಬಾವಿ, ಶ್ರೀ ರಾಘವೇಂದ್ರ ಮಠದ ಬಾವಿಯಿಂದಲೂ ನೀರಿನ ಪೂರೈಕೆಯಾಗುತ್ತದೆ. ನಾಲ್ಕು ಬಾವಿಗಳ ನೀರನ್ನು ಅಡುಗೆಗೆ ಮಾತ್ರ ಬಳಸಲಾಗುತ್ತದೆ ಎಂದು ಕೃಷ್ಣ ಮಠದ ಮೂಲಗಳು ತಿಳಿಸಿವೆ.

ವಾರದಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ಹೋಟೆಲ್, ಲಾಡ್ಜ್‌ಗಳಿಗೆ ನೀರಿನ ಸಮಸ್ಯೆ ನಿರ್ವಹಣೆ ಕಷ್ಟ. ಮೂರು ದಿನಗಳಿಗೊಮ್ಮೆ ಬರುವ ನಗರಸಭೆ ನೀರು ಸಾಕಾಗುವುದಿಲ್ಲ. ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಕೆಳಮಟ್ಟಕ್ಕೆ ತಲುಪಿದೆ. ಪರ್ಯಾಯ ವ್ಯವಸ್ಥೆಯ ಅನಿವಾರ್ಯತೆಯಿಂದ ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿದೆ. ಮಳೆ ಬಾರದಿದ್ದರೆ ಉದ್ಯಮ ನಡೆಸುವುದೇ ಸವಾಲು.
– ಡಾ.ತಲ್ಲೂರು ಶಿವರಾಮ್ ಶೆಟ್ಟಿ, ಅಧ್ಯಕ್ಷ, ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ