ಮೈತ್ರಿ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ: ಸಚಿವೆ ಡಾ. ಜಯಮಾಲ

ಉಡುಪಿ: ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ, ಸತ್ಯಗಳಿವೆ. ಹೀಗಾಗಿ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರಿಕೆ ಸಲ್ಲಿಕೆಗೂ ಮುನ್ನ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ಆತ್ಮ ಜೋಡಣೆ ಮಾಡಿಕೊಳ್ಳಲಾಗಿದೆ. ಸುಳ್ಳು ಹೇಳುವ ಪಕ್ಷವನ್ನು ಸೋಲಿಸಬೇಕು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಪ್ರಮೋದ್ ಅವರನ್ನು ಜೆಡಿಎಸ್‌ಗೆ ಕಳುಹಿಸಿಕೊಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕರನ್ನು ಅಭಿನಂದಿಸುತ್ತೇನೆ. ನಾವು ಜತೆಯಾಗಿ ಸಂಸತ್ ಪ್ರವೇಶಿಸಲಿದ್ದೇವೆ. ಬದಲಾವಣೆ ಜಿಲ್ಲೆಯಿಂದಲೇ ಆರಂಭವಾಗಲಿದೆ. ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬಲು ಬದಲಾವಣೆ ಆಗಬೇಕು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶೃಂಗೇರಿ ಶಾಸಕ ರಾಜೇ ಗೌಡ, ಸಚಿವ ಕೆ.ಜೆ.ಜಾರ್ಜ್, ಎಂ.ಎ. ಗಫೂರ್, ಯು.ಆರ್. ಸಭಾಪತಿ, ಮಾಜಿ ಶಾಸಕ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.