ಕೂಡಲಸಂಗಮ: ಆಲಮಟ್ಟಿ ಜಲಾಶಯದಿಂದ ಗುರುವಾರ ಸಂಜೆ 3 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಪರಿಣಾಮ ಶುಕ್ರವಾರ ನಾರಾಯಣಪುರ ಜಲಾಶಯದ ಹಿನ್ನೀರು ಅಧಿಕಗೊಂಡು ಕೃಷ್ಣಾ, ಮಲಪ್ರಭಾ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು ನಾಲ್ಕು ಮೆಟ್ಟಿಲು ಮಾತ್ರ ಬಾಕಿ ಇದೆ.
ಕೃಷ್ಣಾ ನದಿ ದಡದ ಕೂಡಲಸಂಗಮ, ವಳಕಲದಿನ್ನಿ, ಬಿಸಲದಿನ್ನಿ, ಚವಡಕಮಲದಿನ್ನಿ, ತುರಡಗಿ, ಕಟಗೂರ ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿ ಸೂರ್ಯಕಾಂತಿ, ಕಬ್ಬು ಮುಂತಾದ ಬೆಳೆಗಳು ಜಲಾವೃತವಾಗಿವೆ. ಕೃಷ್ಣಾ ನದಿ ರಭಸದಿಂದ ಹರಿಯುತ್ತಿದ್ದು, ನದಿ ದಡಕ್ಕೆ ಜಾನುವಾರು, ಸಾರ್ವಜನಿಕರು ಹೋಗದಂತೆ ಗ್ರಾಮದಲ್ಲಿ ಡಂಗುರ ಸಾರಲಾಗಿದೆ.
ಗುರುವಾರ ರಾತ್ರಿ ಏಕಾಏಕಿ ನೀರು ಬಂದ ಪರಿಣಾಮ ಕೃಷ್ಣಾ ನದಿ ದಡದಲ್ಲಿ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳು ಮುಳುಗಿದ್ದವು. ಶುಕ್ರವಾರ ಪಂಪ್‌ಸೆಟ್‌ಗಳನ್ನು ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ದೃಶ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಕಂಡು ಬಂತು. ದಿನದಿಂದ ದಿನಕ್ಕೆ ನದಿಯಲ್ಲಿ ನೀರು ಏರಿಕೆಯಾಗುತ್ತಿರುವುದರಿಂದ ರೈತರು, ಗ್ರಾಮದ ಜನರಿಗೆ ಆತಂಕ ಮೂಡಿದೆ.