More

    ಶಿಗ್ಗಾಂವಿ ತಾಲೂಕಿನಲ್ಲಿ 346 ಶಿಕ್ಷಕರ ಹುದ್ದೆ ಖಾಲಿ

    ಗೌಡಪ್ಪ ಬನ್ನೆ ಶಿಗ್ಗಾಂವಿ

    ಬೇಸಿಗೆ ರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಮಕ್ಕಳನ್ನು ಬರಮಾಡಿಕೊಳ್ಳುತ್ತಿದೆ. ಈ ನಡುವೆ ಸರ್ಕಾರಿ ಶಾಲೆಯಲ್ಲಿ ಮೂಲಸೌಲಭ್ಯಗಳ ಜತೆ ಶಿಕ್ಷಕರ ಕೊರತೆಯೂ ಕಾಡುತ್ತಿದ್ದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಾದರೂ ಹೇಗೆ ಎಂಬ ಚಿಂತೆ ಪಾಲಕರನ್ನು ಕಾಡುತ್ತಿದೆ.

    ಶಿಗ್ಗಾಂವಿ ತಾಲೂಕಿನಲ್ಲಿ 162 ಪ್ರಾಥಮಿಕ, 25 ಪ್ರೌಢಶಾಲೆಗಳಿವೆ. 34176 ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಬಹತೇಕ ಶಾಲೆಗಳು ಮಕ್ಕಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳನ್ನು ಹೊಂದಿವೆ. ಆದರೆ, ಬಹುದೊಡ್ಡ ಸಂಖ್ಯೆಯ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ತಾಲೂಕಿನಲ್ಲಿ 872 ಶಿಕ್ಷಕರ ಮಂಜೂರಾತಿಯಿದ್ದು, ಸದ್ಯ 526 ಶಿಕ್ಷಕರಿದ್ದಾರೆ. ಇನ್ನೂ 346 ಶಿಕ್ಷಕರ ಹುದ್ದೆ ಖಾಲಿ ಇವೆ.

    ಒಬ್ಬ ಶಿಕ್ಷಕ ಸರಾಸರಿ 65 ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಾಠ ಮಾಡುವಂತಹ ದುಸ್ಥಿತಿ ಸರ್ಕಾರಿ ಶಾಲೆಗಳಿಗೆ ಬಂದೊದಗಿದೆ. ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ಲಕ್ಷಣ ಕಂಡು ಬರುತ್ತಿದೆ.

    ಶೌಚಗೃಹಗಳ ದುರಸ್ತಿ ಸೇರಿದಂತೆ ಬಹಳಷ್ಟು ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಕಂಡುಬರುತ್ತಿದೆ. ಬೆರಳೆಣಿಕೆಯಷ್ಟು ಶಾಲೆಗಳಿಗೆ ಮಾತ್ರ ಆಟದ ಮೈದಾನ, ಆವರಣ ಗೋಡೆಗಳನ್ನು ನಿರ್ವಿುಸಲಾಗಿದ್ದು, ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತಾಗಿದೆ.

    ಶಿಗ್ಗಾಂವಿ, ಬಂಕಾಪುರ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳು ಕಳೆದ ಬಾರಿ ಸಂಪೂರ್ಣ ದುರಸ್ತಿ ಕಂಡಿವೆ. ಅತಿ ಶಿಥಿಲಗೊಂಡಿದ್ದ ಶಾಲೆಗಳನ್ನು ನೆಲಸಮಗೊಳಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಶೇಷ ಅನುದಾನದಡಿ 102 ಹೊಸ ಕಟ್ಟಡ ನಿರ್ವಿುಸಲಾಗಿದೆ. ಈಗಾಗಲೇ ಶೇ. 90ರಷ್ಟು ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿದ್ದು, ಇನ್ನು ಕೆಲ ವಿಷಯಗಳ ಪಠ್ಯ ಮಾತ್ರ ಪೂರೈಕೆಯಾಗಬೇಕಾಗಿದೆ. 8, 9, 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮಾತ್ರ ಸಮವಸ್ತ್ರ ಪೂರೈಕೆಯಾಗಿದೆ. ಉಳಿದ ತರಗತಿಗಳ ವಿದ್ಯಾರ್ಥಿಗಳು ಸದ್ಯಕ್ಕೆ ಸಮವಸ್ತ್ರದಿಂದ ವಂಚಿತರಾಗಿದ್ದಾರೆ.

    ತಾಲೂಕಿನ ಬಹುತೇಕ ಶಾಲೆಗಳಿಗೆ ಆವರಣ ಗೋಡೆ ಇಲ್ಲದ ಕಾರಣ ಶಾಲಾ ಮೈದಾನಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಶಾಲೆ ಬಿಟ್ಟ ನಂತರ ಶಾಲಾ ಆವರಣ ಇಸ್ಪೀಟ್, ಕುಡುಕರ ಅಡ್ಡಾಗಳಾಗಿ ಪರಿವರ್ತನೆಗೊಂಡಿವೆ. ಬಹುತೇಕ ಶಾಲೆಗಳಲ್ಲಿ ಶೌಚಗೃಹಗಳಿವೆ. ಆದರೆ, ಶಿಕ್ಷಕರು ಉಪಯೋಗಿಸುವ ಶೌಚಗೃಹಗಳು ಮಾತ್ರ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಉಪಯೋಗಿಸುವ ಶೌಚಗೃಹಗಳಿಗೆ ಸರಿಯಾದ ಬಾಗಿಲು, ನೀರಿನ ವ್ಯವಸ್ಥೆ ಇಲ್ಲ. ಇದೆಲ್ಲದರ ಮಧ್ಯೆ ಸರ್ಕಾರ ತಾಲೂಕಿಗೆ ಹೆಚ್ಚುವರಿಯಾಗಿ ಕಳೆದ ಬಾರಿ 48 ಹೊಸ ಶೌಚಗೃಹಗಳನ್ನು ಮಂಜೂರು ಮಾಡಿದೆ.

    ಶಿಕ್ಷಣ ಇಲಾಖೆ ಶಾಲೆಗಳನ್ನು ಆರಂಭಿಸುವ ಮುನ್ನ ಸಕಾಲಕ್ಕೆ ಪಠ್ಯಪುಸ್ತಕ, ಬೋಧಕ ವರ್ಗ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸಿ, ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಂಡು ಶಾಲೆ ಆರಂಭಿಸುವುದು ಸೂಕ್ತ ಎಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.

    ಹಾವೇರಿ ಜಿಲ್ಲೆಗೆ 617 ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೀಡಿದೆ. ಅದರಲ್ಲಿ ಶಿಗ್ಗಾಂವಿ ತಾಲೂಕಿಗೆ 125 ಶಿಕ್ಷಕರನ್ನು ಕೊಟ್ಟಿದ್ದಾರೆ. ಅತಿ ಅವಶ್ಯ ಇರುವ ಕಡೆ ಮರು ಹಂಚಿಕೆ ಮಾಡಿದ್ದೇವೆ. ನಮಗೆ ಇನ್ನೂ 221 ಶಿಕ್ಷಕರ ಅವಶ್ಯಕತೆ ಇದೆ. ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಅತಿಥಿ ಶಿಕ್ಷಕರನ್ನು ತಾಲೂಕಿಗೆ ನೀಡುವ ಭರವಸೆ ಇದೆ. ಸದ್ಯ ಹಂಚಿಕೆಯಾಗಿರುವ ಅತಿಥಿ ಶಿಕ್ಷಕರಿಂದಲೇ ಪಾಠ ಆರಂಭಿಸಿದ್ದೇವೆ.

    | ಎಂ.ಬಿ. ಅಂಬಿಗೇರ, ಬಿಇಒ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts