ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ

ತೇರದಾಳ: ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಕೆಲ ಕ್ಷಣ ಭಾವುಕರಾದರು. ದಯವಿಟ್ಟು ಎಲ್ಲರೂ ಪಕ್ಷ ನಿಷ್ಠೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ನೆಲ ಮುಟ್ಟಿ ನಮಸ್ಕಾರ ಮಾಡುವ ಮೂಲಕ ಮುಖಂಡರು, ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಆಂತರಿಕ ಬೇಡಿಕೆಗಳು ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿವೆ. ಅದಕ್ಕಾಗಿ ತಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಪಕ್ಷ ನಿಷ್ಠೆ ಮೆರೆಯಿರಿ. ನಾನು ಸೇರಿ ಶಿವಾನಂದ ಪಾಟೀಲ ಮತ್ತಿತರರು ಬಂದು ಹೋಗುತ್ತೇವೆ. ಕಾಂಗ್ರೆಸ್ ಪಕ್ಷ ತನ್ನದೆ ಸಿದ್ಧಾಂತ ಹೊಂದಿದೆ. ವೀಣಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ಗಂಡಸರಿಂದ ಕೆಲಸವಾಗಿಲ್ಲ. ಅದಕ್ಕೆ ಹೆಂಗಸರನ್ನು ಕಳಿಸ್ತಾ ಇದ್ದೀವಿ. ಮೂರು ಅವಧಿ ನೆಲ, ಜಲ, ಭಾಷೆ, ಜಿಲ್ಲೆ ಪರವಾಗಿ ಸಂಸತ್‌ನಲ್ಲಿ ಒಂದು ಪದ ಮಾತನಾಡಲಿಲ್ಲ. ಐತಿಹಾಸಿಕ ಬಾದಾಮಿ ಕೊಳಚೆಯಿಂದ ಕೂಡಿದರೆ, ಈ ಭಾಗದಲ್ಲಿ ರೈಲ್ವೆ ಯೋಜನೆ ಇನ್ನೂ ಕೈಗೂಡಲಿಲ್ಲ. ಮೋದಿನ ನೋಡಿ ವೋಟ್ ಹಾಕ್ರಿ ಅಂತಾರೆ. ಮೋದಿ ನೋಡಿದ್ರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಯಾರಿಂದ ಆಗುತ್ತೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಮುಖಂಡ ಬಸವರಾಜ ಕೊಣ್ಣೂರ, ಕಾಂಗ್ರೆಸ್ ಮುಖಂಡ ಪ್ರವೀಣ ನಾಡಗೌಡ, ನಿಲೇಶ ದೇಸಾಯಿ, ಸಂಗಪ್ಪ ಕುಂದಗೋಳ, ಮುತ್ತಣ್ಣ ಹಿಪ್ಪರಗಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ, ಶ್ರೀಶೈಲ ದಳವಾಯಿ, ವೈದ್ಯ ಎ.ಆರ್. ಬೆಳಗಲಿ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರೆಡ್ಡಿ, ಸುಕುಮಾರ ಪಾಟೀಲ, ಸುಶೀಲಕುಮಾರ ಬೆಳಗಲಿ, ಸಿದ್ದು ಕೊಣ್ಣೂರ, ಗ್ರಾಪಂ ಅಧ್ಯಕ್ಷ ಭರಮು ಉಳ್ಳಾಗಡ್ಡಿ, ಅಶೋಕ ಉಳ್ಳಾಗಡ್ಡಿ ಇತರರಿದ್ದರು.