ವಿದ್ಯಾದೇಗುಲದಲ್ಲಿ ಹಸಿರು ವೈಭವ

ತೇರದಾಳ: ಗುಡ್ಡದ ಅಂಚಿನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಆವರಣ, ಉದ್ಯಾನದಲ್ಲಿ ಶಾರದಾ ಮಾತೆಯ ದೇವಸ್ಥಾನ. ಇದು ಯಾವುದೋ ದೇವಸ್ಥಾನದ ವರ್ಣನೆಯಲ್ಲ. ಇದು ವಿದ್ಯಾದೇಗುಲ ಸರ್ಕಾರಿ ಶಾಲೆಯ ಹೊರನೋಟ.

ಹೌದು. ರಬಕವಿ- ಬನಹಟ್ಟಿ ತಾಲೂಕಿನ ಕಾಲತಿಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ವನಸಿರಿಯಿಂದ ಜನರ ಗಮನ ಸೆಳೆಯುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ.

ಗುಡ್ಡ ಕೊರೆದು ಸಮತಟ್ಟು ಮಾಡಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಎರಡು ಹಂತದ ಕೊಠಡಿ ಒಳಗೊಂಡಿದ್ದು, ಕೊಠಡಿಗಳ ಪಕ್ಕದಲ್ಲಿ ಖಾಲಿ ಜಾಗದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.

ಅಶೋಕ ಗಿಡಗಳು ಶಾಲೆಯ ಎತ್ತರಕ್ಕೆ ಬೆಳೆದು ಅಂದ ಹೆಚ್ಚಿಸಿವೆ. ಚೆರ‌್ರಿ, ಬಾದಾಮಿ, ಮಾವು ಸೇರಿ ವಿವಿಧ ಹಣ್ಣಿನ ಮರಗಳ ಜತೆಗೆ ಉದ್ಯಾನ ಮಾದರಿಯ ಸಸಿಗಳನ್ನು ಬೆಳೆಸಲಾಗಿದೆ. ಶಾಲಾ ಮೈದಾನ ಕೈತೋಟದಂತೆ ಸುಂದರವಾಗಿ ಕಂಗೊಳಿಸುತ್ತಿದೆ. ಬಿರುಬಿಸಿಲಿನ ನಡುವೆಯೂ ಮಕ್ಕಳು ಬೇಸಿಗೆ ಸಂಭ್ರಮದಲ್ಲಿ ಪಾಲ್ಗೊಂಡು ಉದ್ಯಾನದಲ್ಲಿ ನಲಿಯುವರು.

ಸಸಿಗಳ ಸಂರಕ್ಷಣೆ
ಶಾಲೆಯಲ್ಲಿ 180ಕ್ಕೂ ಹೆಚ್ಚು ಮಕ್ಕಳಿದ್ದು, ಮೂವರು ಶಿಕ್ಷಕರು ಮಾತ್ರ ಇದ್ದಾರೆ. ಮಾದರಿ ಶಾಲೆಯಾಗಿಸುವ ನಿಟ್ಟಿನಲ್ಲಿ ವಿವಿಧ ಕಲಾತ್ಮಕ ಮತ್ತು ಕ್ರಿಯಾತ್ಮಕ ಅಭಿವದ್ಧಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಉದ್ಯಾನ ಸೌಂದರ್ಯವೋ ಒಂದಾಗಿದೆ. ಇಂದು ಬಿಸಿಲಿನ ತಾಪಕ್ಕೆ ದೊಡ್ಡ ಮರಗಳೇ ಒಣಗಿ ಹೋಗುತ್ತಿವೆ. ಆದರೆ, ಇಲ್ಲಿನ ಶಿಕ್ಷಕರು, ಮಕ್ಕಳು ವಿಶೇಷ ಕಾಳಜಿ ವಹಿಸಿ ಆವರಣದಲ್ಲಿ ನೀರಿನ ವ್ಯವಸ್ಥೆಯಿಲ್ಲದಿದ್ದರೂ ಬೇರೆ ಕಡೆಯಿಂದ ನೀರು ಹಾಕಿ ಸಂರಕ್ಷಣೆ ಮಾಡುತ್ತಿದ್ದಾರೆ.

ಸರಸ್ವತಿ ದೇಗುಲ
ಶಾಲೆ ವಿಶೇಷ ಎಂದರೆ ಉದ್ಯಾನದಲ್ಲಿ ಸರಸ್ವತಿ ಮಾತೆಯ ದೇವಸ್ಥಾನ ನಿರ್ಮಿಸಿರುವುದು. ಇದು ಶಿಕ್ಷಕರು, ಮಕ್ಕಳಲ್ಲಿ ಜ್ಞಾನ ದೇವತೆ ಸರಸ್ವತಿ ಬಗ್ಗೆ ಇರುವ ಭಕ್ತಿಯ ಸಂಕೇತವಾಗಿದೆ.

ಇತ್ತಿತ್ತಲಾಗಿ ಪಾಲಕರು ಖಾಸಗಿ ಶಾಲೆಯ ಆಕರ್ಷಣೆಗೆ ಒಳಗಾಗಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಹೀಗಾಗಿ ನಮ್ಮೂರಿನ ಶಾಲೆಯನ್ನು ವಿಭಿನ್ನವಾಗಿಸುವ ಮೂಲಕ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇವೆ.
– ಮಹಾನಿಂಗ ಹಂದಿಗುಂದ ಎಸ್ಡಿಎಂಸಿ, ಅಧ್ಯಕ್ಷರು

Leave a Reply

Your email address will not be published. Required fields are marked *