More

    ಧರ್ಮದಲ್ಲಿ ರಾಜಕೀಯ ಸಲ್ಲ

    ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ ವಿಕಾಸಕ್ಕಾಗಿರುವ ಪವಿತ್ರವಾದ ಬೆಳಕು ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

    ಸಮೀಪದ ಗೋಲಬಾವಿ ಗ್ರಾಮದಲ್ಲಿ ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು ಕೈಗೊಂಡಿದ್ದ ಮೌನಾನುಷ್ಠಾನ ಮುಕ್ತಾಯ ಮತ್ತು ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

    ಮನುಷ್ಯನು ಮರೆತಿರುವುದನ್ನು ನೆನಪಿಸುವುದಕ್ಕಾಗಿ ಮಠಾಧೀಶರು ಸಮಾಜದಲ್ಲಿ ನಿರಂತರವಾಗಿ ಜ್ಞಾನ ಪಸರಿಸುತ್ತಿರುತ್ತಾರೆ. ಯಾವುದೇ ಧರ್ಮ, ಪರಂಪರೆಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಮಾನವ ಜನ್ಮ ಸಾರ್ಥಕ್ಯವನ್ನು ಪಡೆಯಬೇಕಾದರೆ ಗುರುಕಾರುಣ್ಯ ದೊರಕಿಸಿಕೊಳ್ಳಬೇಕು ಎಂದರು.

    ಗೌರಿಶಂಕರ ಶ್ರೀಗಳು 108 ದಿನ ಮೌನಾನುಷ್ಠಾನ ಹಮ್ಮಿಕೊಂಡಿದ್ದರು. ರಂಭಾಪುರಿ ಪೀಠದಲ್ಲಿ 120 ಜನ ಜಗದ್ಗುರುಗಳಾಗಿದ್ದು, ಇವರ ಅನುಷ್ಠಾನ 120ನೇ ದಿನಕ್ಕೆ ಮುಕ್ತಾಯಗೊಳಿಸುವ ಸಂಕಲ್ಪ ಪೀಠದ್ದಾಗಿತ್ತು ಎಂದು ತಿಳಿಸಿದರು.

    ಅನುಷ್ಠಾನ ನಿರತ ಗೌರಿಶಂಕರ ಶ್ರೀಗಳು 120 ದಿನದ ಮೌನಮುರಿದು ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಶಾಂತಿ, ನೆಮ್ಮದಿ, ಸುಖ, ಸೌಖ್ಯಗಳು ಲಭಿಸಲಿ ಎಂದರು.

    ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀ, ಕೊಣ್ಣೂರ ಹೊರಗಿನಮಠ ವಿಶ್ವಪ್ರಭುದೇವ ಶಿವಾಚಾರ್ಯರು, ತೇರದಾಳ ಹಿರೇಮಠ ಗಂಗಾಧರ ದೇವರು, ಬಬಲಾದಿ ಅಪ್ಪಯ್ಯ ಹಿರೇಮಠ, ಮುಧೋಳ ನಿಜಗುಣ ದೇವರು, ಉದ್ಯಮಿ ಜಗದೀಶ ಗುಡಗುಂಟಿಮಠ, ರಾಜೇಂದ್ರಕುಮಾರ ಗುಡಗುಂಟಿಮಠ, ಭದ್ರಕಾಳಿ ವೀರಭದ್ರ ಅರ್ಚಕ ಕಲ್ಲಯ್ಯ ಮಠದ ಇತರರಿದ್ದರು.

    ಮಾನಿಕಯ್ಯ ಮಠದ ಸ್ವಾಗತಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ವರ್ಷಿಣಿ ಕಳ್ಳಿಮಠ ಪ್ರಾರ್ಥಿಸಿ ಸಂಗೀತ ಸೇವೆ ನೀಡಿದರು. ಶಾಸಕ ಸಿದ್ದು ಸವದಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts