ಆಂಗ್ಲ ಮಾಧ್ಯಮಕ್ಕೆ ಸರ್ಕಾರಿ ಶಾಲೆ ಸಜ್ಜು

ತೇರದಾಳ: ರಾಜ್ಯ ಸರ್ಕಾರದ ಆದೇಶದ ಪ್ರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಳ್ಳುವ ಹಿನ್ನೆಲೆ ಪಟ್ಟಣದ ದೇವರಾಜ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಿಂದುಳಿದ ಜನಾಂಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ದೇವರಾಜ ನಗರದ ಶಾಲೆಯನ್ನು ಸಕಲ ಸೌಲಭ್ಯದೊಂದಿಗೆ ಎಂಟನೇ ತರಗತಿಗೆ ಉನ್ನತೀಕರಿಸಿರುವುದರಿಂದ ಶಾಲೆಗೆ ಆಂಗ್ಲ ಮಾಧ್ಯಮ ಭಾಗ್ಯ ಒದಗಿಬಂದಿದೆ.

ಶಾಲೆಯ 1ರಿಂದ 8ನೇ ತರಗತಿಯಲ್ಲಿ 503 ವಿದ್ಯಾರ್ಥಿಗಳಿದ್ದು, ಹತ್ತು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹನ್ನೊಂದು ಕೊಠಡಿಗಳಿದ್ದು, ಶಾಲೆ ಕ್ಯಾಂಪಸ್‌ನಲ್ಲಿ ಖಾಲಿಯಿರುವ ಸಿಆರ್‌ಪಿ ಕಟ್ಟಡವನ್ನೂ ಬಳಸಿಕೊಳ್ಳಬಹುದಾಗಿದೆ. ವಿಶಾಲ ಮೈದಾನ, ಕಾಂಪೌಂಡ್ ವ್ಯವಸ್ಥೆ, ಕಲಿಕೆಗಾಗಿ ಪ್ರತ್ಯೇಕ ಕಂಪ್ಯೂಟರ್ (ಸಿಎಲ್‌ಸಿ ಕೇಂದ್ರ) ಕೊಠಡಿ, ಎಜುಸ್ಯಾಟ್ ರೂಮ್, ಸ್ಮಾರ್ಟ್ ಕ್ಲಾಸ್ ಹಾಗೂ ಟಿವಿ ಸೇರಿ ಹಲವು ಕಲಿಕಾ ಪೂರಕ ಸೌಲಭ್ಯವನ್ನು ಶಾಲೆ ಒಳಗೊಂಡಿದೆ. ಬೇಸಿಗೆ ಸಂಭ್ರಮ ಮತ್ತು ಬಿಸಿಯೂಟಕ್ಕೂ ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸಿರುವುದು ಗಮನಾರ್ಹವಾಗಿದೆ.

ಸಕಲ ಸೌಲಭ್ಯ ಹೊಂದಿರುವ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಾದ ಆರ್.ಟಿ. ಬನಜವಾಡ, ಎಂ.ಎನ್. ಬಿರಾದಾರ ಅವರನ್ನು ಆಂಗ್ಲ ವಿಷಯ ಬೋಧನೆ ತರಬೇತಿಗಾಗಿ ಇಳಕಲ್ಲನ ಡಯಟ್‌ನಲ್ಲಿ ತರಬೇತಿಗೆ ನಿಯೋಜಿಸಿದೆ.

ಶಾಲೆಯಲ್ಲಿನ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರ್ಕಾರ ಇರುವ ಶಿಕ್ಷಕರನ್ನೇ ಬಳಸಿಕೊಳ್ಳುವುದರಿಂದ ಶಿಕ್ಷಕರ ಕೊರತೆ ಉಂಟಾಗಬಹುದು. ಆದ್ದರಿಂದ ಸರ್ಕಾರ ಇನ್ನಿಬ್ಬರು ಕಾಯಂ ಶಿಕ್ಷಕರನ್ನು ಒದಗಿಸಬೇಕು. ಶಾಲೆ ಆವರಣದ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಬಯೊಮೇಟ್ರಿಕ್ ಹಾಜರಾತಿ ಪದ್ಧತಿ ಜಾರಿಗೊಳಿಸಲು ಆದ್ಯತೆ ನೀಡಬೇಕಿದೆ.

ಮತ ಕ್ಷೇತ್ರದಲ್ಲಿ ನಾಲ್ಕು ಶಾಲೆ
ತೇರದಾಳ ಮತಕ್ಷೇತ್ರದಲ್ಲಿ ತೇರದಾಳದ ದೇವರಾಜ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಹೊಸೂರಿನ ಸರ್ಕಾರಿ ಶಾಲೆ, ನಾವಲಗಿ ಮತ್ತು ಬನಹಟ್ಟಿ ಸರ್ಕಾರಿ ಶಾಲೆಗಳಲ್ಲಿ 2019-20ರಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರ ನಮ್ಮ ಶಾಲೆಯನ್ನು ಆಂಗ್ಲ ಮಾಧ್ಯಮ ಆರಂಭಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದರಿಂದ ಹಿಂದುಳಿದ, ಬಡ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಪಡೆಯುವ ಅವಕಾಶ ಒದಗಿಬಂದಿದೆ. ಇದು ಸರ್ಕಾರದ ಉತ್ತಮ ಯೋಜನೆಯಾಗಿದೆ.
ಎಸ್.ವಿ. ಗೋಠೆಕರ ಶಾಲೆ ಮುಖ್ಯ ಶಿಕ್ಷಕ

ತೇರದಾಳ ಮತಕ್ಷೇತ್ರದಲ್ಲಿ ನಾಲ್ಕು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿದೆ. ಆಯಾ ಶಾಲೆಯ ಇಬ್ಬರು ಶಿಕ್ಷಕರಿಗೆ 15 ದಿನಗಳ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಗೆ ಉಚಿತ ಪ್ರವೇಶವಿದೆ. ಸರ್ಕಾರದ ಎಲ್ಲ ಸೌಲಭ್ಯಗಳೂ ಮಕ್ಕಳಿಗೆ ದೊರಕುತ್ತವೆ.
ಎಸ್.ಬಿ. ಬುರ್ಲಿ ಶಿಕ್ಷಣ ಸಂಯೋಜಕ ಜಮಖಂಡಿ

Leave a Reply

Your email address will not be published. Required fields are marked *